ನಾವುಂದ ಎಂಬಲ್ಲಿ ಕಾರು ಮತ್ತು ಕಂಟೈನರ್ ನಡುವೆ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತ.
ಬೈಂದೂರು: ನಾವುಂದ ಎಂಬಲ್ಲಿ ಕಾರು ಮತ್ತು ಕಂಟೈನರ್ ನಡುವೆ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಪುತ್ರಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಮಮತಾ(36) ಹಾಗೂ ಅವರ ಪುತ್ರಿ ಧೃತಿಕಾ(14) ಮೃತರಾದವರು. ಬೆಂಗಳೂರಿನಿಂದ ಅವರು ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಮುರುಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ನಾವುಂದದಲ್ಲಿ ರಸ್ತೆ ಬದಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಅನಾಹುತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ರಾಘು(40), ಜಾಹ್ನವಿ (12), ಚಾರ್ವಿ(10) ಮತ್ತು ಕಿರಣ್ ಎಂಬುವರು ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಕಿರಣ್ ಅವರ ಪುತ್ರಿ ಚಾರ್ವಿ, ತನ್ನ ತಂದೆ ಆರೋಗ್ಯ ಸರಿಯಾಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದಳು. ಹರಕೆ ಪೂರೈಸಲು ಮತ್ತು ದೇವರ ದರ್ಶನ ಪಡೆಯಲು ಸಂಬಂಧಿಕರಾದ ರಾಘು ಹಾಗೂ ಕಿರಣ್ ಕುಟುಂಬದವರು ದೇವಸ್ಥಾನಗಳ ಪ್ರವಾಸ ಹಮ್ಮಿಕೊಂಡಿದ್ದರು. ರಜೆ ನಿಮಿತ್ತ ಶನಿವಾರ ಮಧ್ಯಾಹ್ನ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮುರುಡೇಶ್ವರದ ಕಡೆಗೆ ಪ್ರಯಾಣ ಬೆಳೆಸುವಾಗ ತ್ರಾಸಿ ಬೀಚಿನಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದಿದ್ದರು. ನಾವುಂದ ತಲುಪುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.