Construction of bus stand if land is available
ತುರುವೇಕೆರೆ: ದಂಡಿನಶಿವರದಲ್ಲಿ ಬಸ್ ನಿಲ್ದಾಣ ಅವಶ್ಯವಿದ್ದು ಜಮೀನು ದೊರೆತರೆ ಸುಸಜ್ಜಿತ ಬಸ್ ನಿಲ್ದಾಣ ನಿಮಾರ್ಣ ಮಾಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ದಂಡಿನಶಿವರದಲ್ಲಿ ಇನ್ನರ್ ವೀಲ್ ಕ್ಲಬ್ ಆಪ್ ಸಂಕಲ್ಪದಿಂದ ನಿರ್ಮಿಸಲಾದ ಪ್ರಯಾಣಿಕರ ವಿಶ್ರಾಂತಿ ತಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ದಂಡಿನಶಿವರ ಹೋಬಳಿ ಕೇಂದ್ರ, ಇಲ್ಲಿಗೆ ಸುಸಜ್ಜಿತ ಬಸ್ ನಿಲ್ದಾಣ ಅವಶ್ಯಕವಾಗಿದೆ. ನಿಲ್ದಾಣಕ್ಕಾಗಿ ಸ್ಥಳ ಕೊರತೆ ಇರುವ ಕಾರಣ ಬಸ್ ನಿಲ್ದಾಣ ಮಾಡಲಾಗಿಲ್ಲ. ಸ್ಥಳಿಯರು ಜಮೀನು ಒದಗಿಸಿದಲ್ಲಿ ಸಾರಿಗೆ ಸಚಿವರಿಂದ 2 ಕೋಟಿ ರೂ. ಅನುದಾನ ತಂದು ಬಸ್ ನಿಲ್ದಾಣ ಮಾಡಲಾಗುವುದು ಎಂದರು.
ಈ ಜಮೀನನ್ನು ಶಿಕ್ಷಣ ಇಲಾಖೆ ನೀಡಲು ಒಪ್ಪಿದರೇ ಶಿಕ್ಷಣ ಸಚಿವರ ಹತ್ತಿರ ಮಾತನಾಡಿ ಕೆಎಸ್ಆರ್ಟಿಸಿ ನಿಗಮಕ್ಕೆ ವರ್ಗಾವಣೆ ಮಾಡಿಸಿ ನಂತರ ಬಸ್ ನಿಲ್ದಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿಲ್ಲ. ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇನ್ನರ್ವೀಲ್ ಕ್ಲಬ್ ಮೂಲಕ ಮಹಿಳೆಯರೆ ಒಟ್ಟುಗೂಡಿ ತಮ್ಮ ಒತ್ತಡದ ಬದುಕಿನ ನಡುವೆ ಸಮಾಜ ಸೇವೆ ಮಾಡುತ್ತಿದ್ದಾರೆ. ಜನಪರ ಕಾರ್ಯಕ್ರಮಗಳ ಜತೆ 3 ಪ್ರಯಾಣಿಕರ ವಿಶ್ರಾಂತಿ ತಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಂತಹ ಜನಪರ ಕಾರ್ಯಕ್ರಮಗಳು ನಡೆಯಲಿ ಎಂದರು.
ಇನ್ನರ್ ವೀಲ್ ಅಧ್ಯಕ್ಷೆ ಇಂದಿರಾ ಪ್ರಭಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಡಿಗೌಡ ಸಿದ್ಧೇಗೌಡ, ಮುಖಂಡ ಶಂಕರೇಗೌಡ, ಕ್ಲಬ್ನ ಸ್ಥಾಪಕ ಅಧ್ಯೆ ಗೀತಾಸುರೇಶ್, ಗೌರವ ಸಲಹೆಗಾರ ಡಾ.ಆಶಾಚೌದ್ರಿ, ಪಿಡಿಒ ಸಾವಿತ್ರಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಗುಪ್ತ, ಮಾಜಿ ಅಧ್ಯಕ್ಷ ಜಯರಾಮ್, ಗ್ಯಾಸ್ ಪ್ರಭು, ಕ್ಲಬ್ ಕಾರ್ಯದರ್ಶಿ ಮಮತ ಅಶೋಕ್, ಮಾಜಿ ಅಧ್ಯಕ್ಷೆ ಲತಾ ಪ್ರಸನ್ನಕುಮಾರ್ ಇತರರಿದ್ದರು.