exam center 
ರಾಜ್ಯ

ವ್ಯಾಪಕ ಬಂದೋಬಸ್ತ್ ನಡುವೆ ಕಾನ್‌ಸ್ಟೆಬಲ್ ಪರೀಕ್ಷೆ

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • ವಿಜಯಪುರದಲ್ಲಿ ಅರ್ಧ ಗಂಟೆ ತಡವಾಗಿ ನೀಡಿದ ಒಎಂಆರ್ ಶೀಟ್
  • ಡಿಸಿಗೆ ವರದಿ ಕೇಳಿದ ಕೆಇಎ
  • ಶೇ. 92.52 ಮಂದಿ ಪರಿಕ್ಷೆಗೆ ಹಾಜರು
  • ಸಂಜೆ ವೇಳೆಗೆ ಒಎಂಆರ್ ಸ್ಕಾೃನಿಂಗ್ ಮುಕ್ತಾಯ

ಬೆಂಗಳೂರು:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ರಾಜ್ಯಾಧ್ಯಂತ ನಡೆದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ನಡೆಯಿತು. ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಭಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿಯಿಂದಾಗಿ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು 149 ಪರೀಕ್ಷಾ ಕೇಂದ್ರಗಳು ಸೇರಿ ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಬೆಳಗ್ಗೆ ನಡೆದ ಉಳಿಕೆ ಮೂಲ ವೃಂದದ 3,77,861 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಶೇ 92.52 ರಷ್ಟು ಅಭ್ಯರ್ಥಿಗಳುಪರೀಕ್ಷೆಗೆ ಹಾಜರಾಗಿದ್ದರು. ಸಂಜೆ ನಡೆದ ಕಲ್ಯಾಣ ಕರ್ನಾಟಕ ವೃಂದದ 76,676 ಅಭ್ಯರ್ಥಿಗಳ ಪೈಕಿ ಶೇ.94 ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಳ್ಳಲಾಯಿತು. ಎಲ್ಲ ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ಮೇಲೆ ವೆಬ್ಕಾಸ್ಟಿಂಗ್ ನಿಗಾ ವಹಿಸಲಾಗಿತ್ತು.
ಬೆಂಗಳೂರು ಸೇರಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಮೇಲೂ ಕೆಇಎ ಕೇಂದ್ರ ಕಚೇರಿಯ ಕಮಾಂಡ್ ಸೆಂಟರ್ ಮೂಲಕ ನೇರ ನಿಗಾ ವಹಿಸಲಾಗಿತ್ತು.

ವರದಿ ಕೇಳಿದ ಕೆಇಎ:

ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಭಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿರುವ ಬಗ್ಗೆ ಬಿಜಯಪುರ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ.
ಪ್ರಶ್ನೆ ಪತ್ರಿಕೆ ಸೋರಿಕಯಾಗಿದೆ ಎಂದು ಆರೋಪಿಸಿ ಪರೀಕ್ಷಾ ಕೇಂದ್ರದ ಗೇಟ್ ಮುರಿದು ಗಲಾಟೆ ನಡೆಸಿದ ಅಭ್ಯರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂಬಂಧ ಅಭ್ಯರ್ಥಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ವಿದ್ಯಾರ್ಥಿಗಳು ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

ನಿಯಮಾನುಸಾರ ಪರೀಕ್ಷೆ ಮುಗಿದ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು. ಆದರೆ. ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅಲ್ಲದೇ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಆ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ.

ಪರೀಕ್ಷೆಯಲ್ಲಿ ನಕಲು ಹಾಗೂ ಪಾರದರ್ಶಕತೆಯ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್ಸೈಟ್‌ಗೆ ಅ್ಲೋಡ್ ಮಾಡುವ ಮಾಡುವ ವ್ಯವಸ್ಥೆಯನ್ನು ಕೆಇಎ ಕೈಗೊಂಡಿದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಒಎಂಆರ್ ಸ್ಕ್ಯಾನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಂಜೆ 7 ಗಂಟೆವರೆಗೆ ಬೆಳಗಿನ ಪರೀಕ್ಷೆಯ 20 ಜಿಲ್ಲೆಗಳ ಒಎಂಅರ್ ಪ್ರತಿ ವೆಬ್ಸೈಟ್‌ಗೆ ಅಪ್ಲೋಡ್ ಮಾಡುವ ಕೆಲಸ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳ ಒಎಂಆರ್ ಪ್ರತಿಗಳನ್ನು ಸ್ಕಾೃನ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ಕೆಇಎ ತಿಳಿಸಿದೆ.

8 ತಿಂಗಳ ಮಗುವಿನ ಆರೈಕೆ ಮಾಡಿ ಮಾನವೀಯತೆ
ಮೆರೆದ ಮಹಿಳಾ ಪೊಲೀಸ್ ಸಿಬ್ಬಂದಿ

ಕಂಕುಳದಲ್ಲಿ ಎಂಟು ತಿಂಗಳ ಮಗುವನ್ನು ಹೊತ್ತುಕೊಂಡ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ನೆರವಿಗೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ.
ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಕೃಷ್ಣಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದ ಪೊಲೀಸ್ ಕಾನ್‌ಸ್ಟೆಬಲ್ ಖಾಲಿ ಹುದ್ದೆಗಳ ಪರೀಕ್ಷೆಗೆ ಆಗಮಿಸಿದ್ದ ಮಹಿಳೆಯ ಮಗುವನ್ನು ಪೊಲೀಸ್ ಸಿಬ್ಬಂದಿಗಳು ಎತ್ತುಕೊಂಡು ಕೆಲ ಗಂಟೆಗಳ ಕಾಲ ಆರೈಕೆ ಮಾಡಿದ್ದಾರೆ. ಇದರಿಂದ ಮಗುವಿನ ತಾಯಿ ನಿಶ್ಚಿಂತೆಯಿಂದ ಪರೀಕ್ಷೆ ಬರೆದ್ದಿದ್ದಾರೆ.
ಪರೀಕ್ಷಾ ನಿಯಮಗಳಂತೆ ಅಭ್ಯರ್ಥಿಗಳು ಮಾತ್ರ ಕೊಠಡಿಯೊಳಗೆ ಹೋಗಬೇಕು. ಆದರೆ, ಕೊಠಡಿಗೆ ಹೋಗುವ ಕ್ಷಣದಲ್ಲಿ ಮಗು ಜೋರಾಗಿ ಅಳಲು ಆರಂಭಿಸಿದೆ. ಏನು ಮಾಡಬೇಕು ಎಂಬ ದಿಕ್ಕು ತೋಚದ ಅಭ್ಯರ್ಥಿಯ ನೇರವಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಸಿಬ್ಬಂದಿ ಗಮನಿಸಿದ್ದಾರೆ. ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ಅಳುತ್ತಿದ್ದ ಮಗುವನ್ನು ಹೇಗೆ ಸಮಧಾನ ಮಾಡಬೇಕು ಎಂದುಕೊಂಡ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಬಳಿ ಇದ್ದ ಮನೆಯೊಂದರಲ್ಲಿ ಸೀರೆ ಪಡೆದುಕೊಂಡು ತೊಟ್ಟಿಲಾಗಿ ನಿರ್ಮಿಸಿ ಮಗುವನ್ನು ಸಮಾಧಾನ ಪಡಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ. ಪರೀಕ್ಷೆ ಮುಗಿಸಿ ಆಚೆಗೆ ಬಂದ ತಾಯಿ ಪೊಲೀಸ್ ಸಿಬ್ಬಂದಿಯ ಕಾಳಜಿಗೆ ಧನ್ಯವಾದ ಹೇಳಿದ್ದಾರೆ.