ಬೆಂಗಳೂರು: ಲೈಂಗಿಕ ಸಂಪರ್ಕಕ್ಕೆ ಅಪ್ರಾಪ್ತ ಬಾಲಕಿಯು ಸಮ್ಮತಿ ನೀಡಿದ್ದರೂ, ಅದಕ್ಕೆ ಕಾನೂನಿನಲ್ಲಿ ಅನುಮತಿಯಿಲ್ಲ. ಆದ್ದರಿಂದ, ಅಪ್ರಾಪ್ತೆಯೊಡನೆ ನಡೆಸುವ ಸಮ್ಮತಿಯ ಲೈಂಗಿಕ ಸಂಪರ್ಕವೂ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಸಚಿನ್ ಯು. ಗೌಡ ಎಂಬಾತನ್ನು ಪೋಕ್ಸೋ ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪಾಲಕರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಖುಲಾಸೆ ಆದೇಶವನ್ನು ರದ್ದುಪಡಿಸಿದ್ದು, ಅಪರಾಧಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 1.5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪ್ರಾಸಿಕ್ಯೂಷನ್ ಸಲ್ಲಿಸಿರುವ ದಾಖಲೆಗಳಿಂದ ಲೈಂಗಿಕ ಸಂಪರ್ಕ ಸಂದರ್ಭದಲ್ಲಿ ಸಂತ್ರಸ್ತೆಗೆ 16 ವರ್ಷವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಹೀಗಿರುವಾಗ ಲೈಂಗಿಕ ಸಂಪರ್ಕಕ್ಕೆ ಆಕೆಯ ಸಮ್ಮತಿಯಿದ್ದರೂ, ಅದು ಅಪರಾಧಿಗೆ ಶಿಕ್ಷೆಯಿಂದ ರಕ್ಷಣೆ ಒದಗಿಸುವುದಿಲ್ಲ. ಆದ್ದರಿಂದ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲು ಪೂರಕ ಸಾಕ್ಷ್ಯಗಳಿದ್ದರೂ, ಲೈಂಗಿಕ ಸಂಪರ್ಕಕ್ಕೆ ಯುವತಿಯ ಒಪ್ಪಿಗೆಯಿತ್ತು ಎಂಬ ಕಾರಣಕ್ಕೆ ಪ್ರಕರಣದಿಂದ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ತಪ್ಪು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ℹ️ ಪ್ರಕರಣದ ಹಿನ್ನೆಲೆ
2021ರಲ್ಲಿ ಫೇಸ್ಬುಕ್ ಮೂಲಕ 16 ವರ್ಷದ ಸಂತ್ರಸ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಸಚಿನ್, ಆಕೆಯನ್ನು ಕಾರಿನಲ್ಲಿ ಅಪಹರಣ ಮಾಡಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದನು. ಪರಿಣಾಮ ಸಂತ್ರಸ್ತೆ ಗರ್ಭಿಣಿಯಾಗಿದ್ದಳು. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಯ ವಿರುದ್ಧ ಸೂಕ್ತ ಸಾ್ಯಾಧಾರಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಮತ್ತು ಬಾಲಕಿಯು ಸ್ವಂತ ನಿರ್ಧಾರದ ಮೇಲೆ ಯುವಕನ ಜತೆ ಹೋಗಿದ್ದಾಳೆ ಎಂಬ ಕಾರಣ ನೀಡಿ ಖುಲಾಸೆಗೊಳಿಸಿತ್ತು. ಈ ಆದೇಯವನ್ನು ಸಂತ್ರಸ್ತೆಯ ಪಾಲಕರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.