ವಡಗೇರಾದಿಂದ ಸೂರತ್ ಚೆನೈ ಭಾರತ್‌ಮಾಲಾ ರಾಷ್ಟ್ರೀಯ ಹೆದ್ದಾರಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಸಂಸದ ಜಿ.ಕುಮಾರ ನಾಯಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಗುಗೌಡ ಮಾಲಿಪಾಟೀಲ್, ಬಸವರಾಜ ನೀಲಹಳ್ಳಿ, ಭಾಶುಮೀಯಾ ನಾಯ್ಕೋಡಿ, ಮೈನೋದ್ದೀನ್ ದೇವದುರ್ಗ, ಡಾ.ಗಾಳೆಪ್ಪ ಪೂಜಾರಿ, ಶರಣು ಪಡಶೆಟ್ಟಿ, ಅಬ್ದುಲ್ ಚಿಗಾನೂರ ಇತರರಿದ್ದರು. 
ರಾಜ್ಯ

ವಡಗೇರಾದಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳ ಒತ್ತಾಯ
  • ಸಂಸದ ಜಿ.ಕುಮಾರ ನಾಯಕ ಅವರಿಗೆ ಮನವಿ
ವಡಗೇರಾ: ತಾಲೂಕು ಕೇಂದ್ರ ವಡಗೇರಾ ಪಟ್ಟಣದಿಂದ ಸೂರತ್ ಚೆನ್ನೈ ಭಾರತ್‌ಮಾಲಾ ರಾಷ್ಟ್ರೀಯ ಹೆದ್ದಾರಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪಟ್ಟಣದ ಸಾರ್ವಜನಿಕರು ಸಂಸದ ಜಿ.ಕುಮಾರ ನಾಯಕ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ವಡಗೇರಾ ತಾಲೂಕು ಕೇಂದ್ರದ ಹೊರವಲಯದಲ್ಲಿ ನಡೆಯುತ್ತಿರುವ ಭಾರತ್‌ಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳ ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಅವರನ್ನು ಭೇಟಿ ಮಾಡಿ, ಈ ಹೆದ್ದಾರಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ತಾಲೂಕಿನ ಖಾನಾಪುರ ಹಾಗೂ ಬೆಂಡಬೇಬಳಿ ಗ್ರಾಮದ ಸಮೀಪ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ತಾಲೂಕು ಕೇಂದ್ರ ವಡಗೇರಾದಿಂದ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ನಿರ್ಮಾಣಕ್ಕಾಗಿ ತಾಲೂಕಿನ ರೈತರು ಈಗಾಗಲೇ ಸಾವಿರಾರು ಎಕರೆ ಜಮೀನು ಕಳೆದುಕೊಂಡಿದ್ದಾರೆ. ಆದರೆ ಹೆದ್ದಾರಿ ನಿರ್ಮಾಣವಾಗುತ್ತಿರುವ ತಾಲೂಕು ಕೇಂದ್ರದ ಜನರಿಗೆ ಅದರ ಪ್ರಯೋಜನ ಪಡೆಯಲು ಅವಕಾಶವಿಲ್ಲದಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ವಡಗೇರಾ ತಾಲೂಕು ಕೇಂದ್ರದ ವ್ಯಾಪ್ತಿಗೆ ೬೫ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿವೆ. ಈ ಭಾಗದ ಜನರು ವ್ಯಾಪಾರ, ಶಿಕ್ಷಣ, ಉದ್ಯೋಗ ಸೇರಿ ವಿವಿಧ ಉದ್ದೇಶಗಳಿಗೆ ದೂರದ ಪಟ್ಟಣಗಳಿಗೆ ತೆರಳಬೇಕಾಗಿದ್ದು, ಸೂರತ್ ಚೆನೈ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸಿದರೆ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೆ, ಕೃಷಿ ಉತ್ಪನ್ನಗಳ ಸಾಗಾಟಕ್ಕೂ ಅನುಕೂಲವಾಗಲಿದೆ ಎಂದರು.
ಈ ವಿಷಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ವಡಗೇರಾ ಪಟ್ಟಣದಿಂದ ಹೆದ್ದಾರಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಸಂಸದರಿಗೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಂಸದ ಜಿ.ಕುಮಾರ ನಾಯಕ ಅವರು, ಈ ಕುರಿತು ಸಂಬಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಸಂಗುಗೌಡ ಮಾಲಿಪಾಟೀಲ್, ಬಸವರಾಜ ನೀಲಹಳ್ಳಿ, ಭಾಶುಮೀಯಾ ನಾಯ್ಕೋಡಿ, ಮೈನೋದ್ದೀನ್ ದೇವದುರ್ಗ, ಡಾ.ಗಾಳೆಪ್ಪ ಪೂಜಾರಿ, ಶರಣು ಪಡಶೆಟ್ಟಿ, ಅಬ್ದುಲ್ ಚಿಗಾನೂರ ಸೇರಿ ಅನೇಕರು ಇದ್ದರು.