ವಿಧಾನಸೌಧ 
ರಾಜ್ಯ

ಸಭಾಪತಿ ಉಪಸಭಾಪತಿ ಸ್ಥಾನ ವಶಕ್ಕೆ ಪಡೆಯಲಿರುವ ಕೈ

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಸ್ಥಾನ ಹೆಚ್ಚಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಸಭಾಪತಿ ಮತ್ತು ಉಪಸಭಾಪತಿ ಸ್ಥಾನವನ್ನು ತೆಕ್ಕೆಗೆ ಪಡೆಯಲು ಆಸಕ್ತಿ ವಹಿಸಿದ್ದು, ಆಗಸ್ಟ್‌ನಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿಯೇ ಈ ಎರಡು ಸ್ಥಾನವನ್ನು ನಿರ್ಧಾರ ಮಾಡುವುದರ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆಗಳು ಶುರುವಾಗಿದೆ.
ಪ್ರಸ್ತುತ ಬಸವರಾಜ ಹೊರಟ್ಟಿ ಸಭಾಪತಿ ಮತ್ತು ಎಂ.ಕೆ.ಪ್ರಾಣೇಶ್ ಉಪಸಭಾಪತಿಯಾಗಿದ್ದಾರೆ.
ಪರಿಷತ್‌ನಲ್ಲಿ ಕಾಂಗ್ರೆಸ್ 39 ಸ್ಥಾನ, ಬಿಜೆಪಿ 26 ಸ್ಥಾನ ಮತ್ತು ಜೆಡಿಎಸ್ ಏಳು ಸ್ಥಾನವನ್ನು ಹೊಂದಿದೆ. ಜುಲೈ 21ಕ್ಕೆ ಬಿಜೆಪಿಯ ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತರಾಮ್ ಸಿದ್ಧಿ, ಡಾ. ತಳವಾರ ಸಾಬಣ್ಣ ಮತ್ತು ಕಾಂಗ್ರೆಸ್‌ನ ರಮೇಶ್ ಬಾಬು ಅವಧಿ ಮುಗಿಯಲಿದೆ. ರಮೇಶ್ ಬಾಬು ಹೊರತುಪಡಿಸಿದರೆ ಉಳಿದವರು ಬಿಜೆಪಿಯ ಸದಸ್ಯರಾಗಿದ್ದಾರೆ. ಈ ಐದು ಸ್ಥಾನಗಳು ಕಾಂಗ್ರೆಸ್‌ನ ತೆಕ್ಕೆಗೆ ಬೀಳಲಿದೆ. ಆಗ ಕಾಂಗ್ರೆಸ್ ಸದಸ್ಯರ ಬಲ 44ಕ್ಕೆ ಏರಿಕೆ ಆಗಲಿದೆ. ಆದರಿಂದ ಸಭಾಪತಿ ಮತ್ತು ಉಪಸಭಾತಿ ಎರಡೂ ಸ್ಥಾನವನ್ನೂ ತಮ್ಮ ಪಕ್ಷದ ಸದಸ್ಯರಿಗೆ ನೀಡಬೇಕೆಂಬ ಒತ್ತಾಯ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿದೆ.
ಅಲ್ಲದೆ ಪರಿಷತ್‌ನಿಂದ ಯತೀಂದ್ರ ಸಿದ್ದರಾಮಯ್ಯ ಸಚಿವರಾಗಿದ್ದು, ಮತ್ತೊಬ್ಬ ಸದಸ್ಯರಿಗೆ ಸಚಿವ ಸ್ಥಾನ ಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಸಚಿವ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವ ಎನ್.ಎಸ್. ಬೋಸರಾಜು ಮತ್ತು ನಟಿ ಉಮಾಶ್ರೀ ಹೆಸರು ಬಲವಾಗಿ ಕೇಳಿಬರುತ್ತಿದೆ. ಒಂದು ವೇಳೆ ಸಚಿವ ಸ್ಥಾನ ಸಿಗದೆ ಇದ್ದವರಿಗೆ ಸಭಾಪತಿ ಮತ್ತು ಉಪಸಭಾಪತಿ ಸ್ಥಾನವನ್ನು ಕೊಡಬಹುದು. ಇವರನ್ನು ಹೊರತು ಪಡಿಸಿ ಪುಟ್ಟಣ್ಣ, ಮಂಜುನಾಥ್ ಭಂಡಾರಿ ಸಹ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ.