charansing 
ರಾಜ್ಯ

ಯುವಶಕ್ತಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ: ಚರಣ್‌ಸಿಂಗ್ ಸಪ್ರಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಮಾನದಂಡ

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ, ನೀಟ್ ಹಗರಣ ಸೇರಿದಂತೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ.
  • ಯುವಜನರು ಹಾಗೂ ಪದವೀಧರರಿಗೆ ಉದ್ಯೋಗ ಕಲ್ಪಿಸುವಲ್ಲಿ ಬಿಜೆಪಿ ವಿಫಲವಾಗಿದೆ.
ಬೆಂಗಳೂರು:
ಯುವ ಜನಾಂಗ ದೇಶದ ಬೆನ್ನೆಲುಬಾಗಿದ್ದು, ಯುವಶಕ್ತಿಗೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಎಐಸಿಸಿ ವೀಕ್ಷಕ ಚರಣ್‌ಸಿಂಗ್ ಸಪ್ರಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ, ನೀಟ್ ಹಗರಣ ಸೇರಿದಂತೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಜಾತಿ ಮತ್ತು ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದರು.
ಯುವಜನರು ಹಾಗೂ ಪದವೀಧರರಿಗೆ ಉದ್ಯೋಗ ಕಲ್ಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ದೇಶದ ಯುವಜನಾಂಗದ ಸರ್ವತೋಮುಖ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಕಾಂಗ್ರೆಸ್ ಪಕ್ಷವು ಯುವಕರಿಗೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡುವ ಮೂಲಕ ನಾಯಕತ್ವ ಬೆಳೆಸಲಿದೆ. ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲೂ ಪಕ್ಷ ಮುಂದಾಗಲಿದೆ ಎಂದರು.
ಕಾರ್ಯಕರ್ತರ ಅಭಿಪ್ರಾಯ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಾಗೂ ಮಾಹಿತಿಯನ್ನು ಪಕ್ಷಕ್ಕೆ ನೀಡಬಹುದು. ಕಾರ್ಯಕರ್ತರ ಆಶಯದಂತೆ ಪಕ್ಷವನ್ನು ಸಂಘಟಿಸುವ ಹಾಗೂ ಬೂತ್ ಮಟ್ಟದಲ್ಲಿ ಸಮಾಜಮುಖಿ ಸೇವೆ ಮಾಡುವ ಕಾರ್ಯಕರ್ತರನ್ನು ಗುರುತಿಸಲಾಗುವುದು ಎಂದು ಚರಣ್‌ಸಿಂಗ್ ಸಪ್ರಾ ತಿಳಿಸಿದರು.
ಕಾರ್ಯಕರ್ತರೇ ಪಕ್ಷದ ಆಸ್ತಿ
ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ. ಅವರ ಪರಿಶ್ರಮದಿಂದಲೇ ಪಕ್ಷ ಸಂಘಟನೆಯಾಗುತ್ತದೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ದೇಶದ ಪ್ರಗತಿ, ಏಳಿಗೆ ಮತ್ತು ಐಕ್ಯತೆಗಾಗಿ ದುಡಿಯುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಪ್ರತಿಪಾದಿಸಿದರು.
ಜನವಿರೋಧಿ ನೀತಿಗಳು ಹಾಗೂ ನಿರಂತರ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡಲು ದೇಶದ ಜನತೆ ಕಾಯುತ್ತಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಚರಣ್‌ಸಿಂಗ್ ಸಪ್ರಾ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಹಾಗೂ ಮಾಜಿ ಶಾಸಕ ನಂಜುಂಡಸ್ವಾಮಿ ಉಪಸ್ಥಿತರಿದ್ದರು.

*ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ. ಅವರ ಪರಿಶ್ರಮದಿಂದಲೇ ಪಕ್ಷ ಸಂಘಟನೆಯಾಗುತ್ತದೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ದೇಶದ ಪ್ರಗತಿ, ಏಳಿಗೆ ಮತ್ತು ಐಕ್ಯತೆಗಾಗಿ ದುಡಿಯುವ ಏಕೈಕ ಪಕ್ಷ ಕಾಂಗ್ರೆಸ್

-ಎಐಸಿಸಿ ವೀಕ್ಷಕ ಚರಣ್‌ಸಿಂಗ್ ಸಪ್ರಾ