R Ashoka | ಪ್ರತಿಪಕ್ಷದ ನಾಯಕ ಆರ್​ ಅಶೋಕ್ 
ರಾಜ್ಯ

ಕಾಂಗ್ರೆಸ್​ ಶಾಸಕರು ರೌಡಿಗಳಂತೆ ವರ್ತಿಸಿದ್ದಾರೆ; ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​ ಅಶೋಕ್ ವಾಗ್ದಾಳಿ | R Ashoka

ಬೆಂಗಳೂರು: ಇಂದು ಆರಂಭವಾಗಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಾವೇ ಸಿದ್ಧಪಡಿಸಿಕೊಂಡು ಬಂದಿದ್ದ ಭಾಷಣ ಮುಗಿಸಿ ಹೊರ ನಡೆಯುತ್ತಿದ್ದಾಗ ಕಾಂಗ್ರೆಸ್​ ಸದಸ್ಯರು ತೋರಿರುವ ವರ್ತನೆಯನ್ನು ಪ್ರತಿಪಕ್ಷದ ನಾಯಕ ಆರ್​ ಅಶೋಕ್​ ಟೀಕಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಆರ್​ ಅಶೋಕ್, ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನವಾಗಿದ್ದು, ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ತಮ್ಮ ಭಾಷಣವನ್ನ ಮಂಡಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅನುಚಾನವಾಗಿ ಪಾಲಿಸಿದ್ದಾರೆ ಎಂದರು.
ಆದರೆ ಕಾಂಗ್ರೆಸ್​ ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸಂವಿಧಾನಕ್ಕೆ, ರಾಜ್ಯಪಾಲರಿಗೆ, ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನ ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುವ ಮೂಲಕ ಅಪಮಾನ ಎಸಗಿದ್ದಾರೆ. ಸದನದ ಹಿರಿಯ ಸದಸ್ಯರು ಹಾಗೂ ಕಾನೂನು ಸಚಿವರಾದ ಎಚ್​ ಕೆ ಪಾಟೀಲ್​ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಆದ್ದರಿಂದ ಅವರು ಆ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯಪಾಲರು ಈ ರೀತಿ ತಮ್ಮ ಭಾಷಣವನ್ನ ಪೂರ್ತಿ ಓದದೆ ಕೇವಲ ಸಾಂಕೇತಿಕವಾಗಿ ಮಂಡಿಸಿ ಹೊರಟಿರುವುದು ಇದೇನು ಮೊದಲಲ್ಲ. ಈ ಹಿಂದೆ ಮಾಜಿ ರಾಜ್ಯಪಾಲರುಗಳಾದ ಖುರ್ಷಿದ್ ಆಲಂ ಖಾನ್ ಹಾಗೂ ಹಂಸರಾಜ್ ಭಾರಧ್ವಾಜ್ ಈ ರೀತಿ ಮಾಡಿರುವ ಉದಾಹರಣೆಗಳಿವೆ. ಆಗಲೂ ಸಹ ಅವರನ್ನು ಭಾಷಣದ ಬಳಿಕ ಸದನದ ಸಂಪ್ರದಾಯಂದತೆ ರಾಷ್ಟ್ರಗೀತೆ ಹಾಡಿ ಗೌರವಯುತವಾಗಿ ಬೀಳ್ಕೊಡಲಾಗಿತ್ತು. ಆದರೆ ಇಂದು ರಾಜ್ಯಪಾಲರು ಭಾಷಣ ಮಂಡಿಸಿದ ನಂತರ ರಾಷ್ಟ್ರಗೀತೆಯನ್ನೂ ನುಡಿಸಲಿಲ್ಲ ಮತ್ತು ರಾಜ್ಯಪಾಲರನ್ನು ಗೌರವಯುತವಾಗಿ ಬೀಳ್ಕೊಡಲೂ ಇಲ್ಲ. ಇದು ಸಂವಿಧಾನ, ರಾಜ್ಯಪಾಲರ ಹುದ್ದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ರಾಷ್ಟ್ರಗೀತೆಗೆ ಮಾಡಿರುವ ಘೋರ ಅಪಮಾನ ಎಂದರು.
ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್​ರ ದುರ್ನಡತೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಂತಿದ್ದು, ಇಂದಿನ ಎಲ್ಲಾ ಘಟನಾವಳಿಗಳು ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದ್ದು, ಸದನದ ಗೌರವಕ್ಕೆ ಚ್ಯುತಿ ತರುವ ರೀತಿ ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರಾದ ಯು ಟಿ ಖಾದರ್​ ಅವರಿಗೆ ಪತ್ರ ಬರೆದಿದ್ದಾರೆ.