ಪ್ರಧಾನಿ ಮೋದಿ ಭಜನೆ ಕ್ಲಬ್ಬಿಂಗ್ ಟೀಕಿಸಿದ ಗೃಹ ಸಚಿವರು!... 
ರಾಜ್ಯ

ಪ್ರಧಾನಿ ಮೋದಿ ಭಜನೆ ಕ್ಲಬ್ಬಿಂಗ್ ಟೀಕಿಸಿದ ಗೃಹ ಸಚಿವರು!...ಜೂನಿಯರ್ ಖರ್ಗೆಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಬಿಜೆಪಿ ತಿರುಗೇಟು! | Bhajan Clubbing

ಬೆಂಗಳೂರು: ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆದ ಭಜನೆ ಕ್ಲಬ್ಬಿಂಗ್ (Bhajan Clubbing) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಕೈ ನಾಯಕರು ದೇಶದ ಸಾಂಸ್ಕೃತಿಕ ಪರಂಪರೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

ಬೆಂಗಳೂರು: ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆದ ಭಜನೆ ಕ್ಲಬ್ಬಿಂಗ್ (Bhajan Clubbing) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಕೈ ನಾಯಕರು ದೇಶದ ಸಾಂಸ್ಕೃತಿಕ ಪರಂಪರೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಜನೆ ಕ್ಲಬ್ಬಿಂಗ್​ನಲ್ಲಿ ಭಾಗವಹಿಸಲು ಸಮಯವಿದೆ, ಆದರೆ ಚುನಾವಣಾ ಆಯೋಗದ ಬಗ್ಗೆ ಕೇಳಿಬರುತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ. ಕಳೆದ 13 ವರ್ಷಗಳಿಂದ ಇದೇ ಮಾದರಿ ನಡೆದುಕೊಂಡು ಬಂದಿದೆ. ಸರ್ಕಾರದ ಮುಂದೆ ಕಠಿಣ ಪ್ರಶ್ನೆಗಳು ಎದುರಾದಾಗಲೆಲ್ಲಾ ಪ್ರಧಾನಿಯವರು ಉತ್ತರ ನೀಡದೆ ಜಾರಿಕೊಳ್ಳುತ್ತಾರೆ. ಸಂಭ್ರಮಾಚರಣೆಗಳಲ್ಲಿ ಅವರ ಉಪಸ್ಥಿತಿ ಇರುತ್ತದೆ, ಆದರೆ ಹೊಣೆಗಾರಿಕೆಯ ವಿಷಯ ಬಂದಾಗ ಅವರ ಮೌನವೇ ಉತ್ತರವಾಗಿರುತ್ತದೆ ಎಂದು ಟೀಕಿಸಿದರು.

ಗೃಹ ಸಚಿವರಿಗೆ ಬಿಜೆಪಿ ತಿರುಗೇಟು!...

ಪ್ರಿಯಾಂಕ್ ಖರ್ಗೆ ಟೀಕೆಗೆ ತಕ್ಷಣವೇ ತಿರುಗೇಟು ನೀಡಿದ ಬಿಜೆಪಿ, ಕಾಂಗ್ರೆಸ್ ಪಕ್ಷವು ಭಾರತದ ಭಜನೆ ಮತ್ತು ಭಕ್ತಿ ಪರಂಪರೆಯನ್ನು ಹಾಸ್ಯಾಸ್ಪದವಾಗಿ ಚಿತ್ರಿಸುತ್ತಿದೆ ಮತ್ತು ಅಪಮಾನಿಸುತ್ತಿದೆ ಎಂದು ಆರೋಪಿಸಿತು.

ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರಿಯಾಂಕ್ ಖರ್ಗೆಗೆ ಪ್ರತ್ಯುತ್ತರ ನೀಡಿ, ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಭಾರತದ ಅದ್ಭುತ ನಾಗರಿಕ ಪರಂಪರೆಯಾದ ಭಜನೆ ಮತ್ತು ಭಕ್ತಿಯನ್ನು ಗೇಲಿ ಮಾಡಿದೆ ಹಾಗೂ ಅಪಮಾನಿಸಿದೆ. ಸ್ವಯಂ ಸೇವೆಯ ಕಾಂಗ್ರೆಸ್‌ನ ಮೊದಲ ಕುಟುಂಬದ (ಗಾಂಧಿ ಕುಟುಂಬ) ಜಪ ಮಾಡುವುದನ್ನೇ ಕಸುಬು ಮಾಡಿಕೊಂಡಿರುವ ಜೂನಿಯರ್ ಖರ್ಗೆ ಅವರಿಂದ ಇದಕ್ಕಿಂತ ಉತ್ತಮವಾದುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದರು.

ಖರ್ಗೆ ಅವರು ಪ್ರಧಾನಿಯವರನ್ನು ಪ್ರಶ್ನಿಸುವ ಬದಲು ತಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲಿ ಎಂದ ಕೇಶವನ್, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸತತ ಸೋಲುಗಳನ್ನು ಅನುಭವಿಸುತ್ತಿದೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸತತ 3 ಲೋಕಸಭಾ ಚುನಾವಣೆಗಳಲ್ಲಿ ಸೋಲನುಭವಿಸಿದೆ ಮತ್ತು ಸುಮಾರು 100 ಕ್ಕೂ ಹೆಚ್ಚು ವಿಧಾನಸಭೆ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿದೆ. ಹೀಗಿದ್ದರೂ ರಾಹುಲ್ ಗಾಂಧಿಯವರ ಹೊಣೆಗಾರಿಕೆಯನ್ನು ಪ್ರಶ್ನಿಸುವ ಧೈರ್ಯ ಜೂನಿಯರ್ ಖರ್ಗೆಗೆ ಒಂದಿಷ್ಟಾದರೂ ಇದೆಯೇ? ಎಂದು ಕಿಡಿಕಾರಿದರು.

ಏನಿದು ಭಜನೆ ಕ್ಲಬ್ಬಿಂಗ್..?

ಭಾರತೀಯ ಜನಸಂಘದ ಪ್ರಮುಖರಾದ ದೀನ್‌ದಯಾಳ್ ಉಪಾಧ್ಯಾಯ ಅವರ 110ನೇ ಜನ್ಮದಿನಾಚರಣೆಯ ಅಂಗವಾಗಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಎದುರಿಗಿನ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಭಜನೆ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮೊದಲ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿಯವರು ಶ್ರೀರಾಮನ ಭಜನೆಗೆ ಚಪ್ಪಾಳೆ ತಟ್ಟುತ್ತಾ, ಕಂಜರಿ ನುಡಿಸುತ್ತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಜೆನ್​-ಜೀ ಜೊತೆ ಭಜನ್ ಕ್ಲಬ್ಬಿಂಗ್​ಗೆ ಹಾಜರಾದ ನಮೋ!
ಭಕ್ತಿಗೀತೆಗಳನ್ನು ಹಾಡುತ್ತಾ, ಕುಣಿಯುತ್ತಾ ಭಕ್ತಿಯಲ್ಲಿ ಮಗ್ನರಾಗುವ ವಿನೂತನ ಪರಿಕಲ್ಪನೆ ಈ ಭಜನೆ ಕ್ಲಬ್ಬಿಂಗ್

ಭಜನೆ ಕ್ಲಬ್ಬಿಂಗ್ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಜನಪ್ರಿಯವಾಗುತ್ತಿರುವ ಒಂದು ಆಧುನಿಕ ಸಾಂಸ್ಕೃತಿಕ ಟ್ರೆಂಡ್ ಆಗಿದೆ. ಕನ್ಸರ್ಟ್ (ಸಂಗೀತ ಕಛೇರಿ) ಮಾದರಿಯ ವೇದಿಕೆಯಲ್ಲಿ ಮದ್ಯಪಾನ ಹಾಗೂ ಪಾರ್ಟಿ ಸಂಸ್ಕೃತಿಯಿಲ್ಲದೆ, ಯುವಕ-ಯುವತಿಯರು ಒಗ್ಗೂಡಿ ಹೈ-ಎನರ್ಜಿ ಸಂಗೀತದೊಂದಿಗೆ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಾ, ಕುಣಿಯುತ್ತಾ ಭಕ್ತಿಯಲ್ಲಿ ಮಗ್ನರಾಗುವ ವಿನೂತನ ಪರಿಕಲ್ಪನೆ ಇದಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲೂ ಈ ಭಜನೆ ಕ್ಲಬ್ಬಿಂಗ್ ಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ(ಏಜೆನ್ಸೀಸ್​).