ಸೇಡಂ ತಾಲೂಕಿನ ಬಿಬ್ಬಳ್ಳಿಯಲ್ಲಿ 2.5 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ತರನಳ್ಳಿ ರಸ್ತೆ ಸಿಡಿ ನಿರ್ಮಾಣ ಕಾಮಗಾರಿಗೆ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಶ್ರೀಯಾಂಕಾ ಧನಶ್ರೀ, ಶಿವಶರಣಪ್ಪ ಜೇವರ್ಗಿ, ಬಸವರಾಜ ಪಾಟೀಲ್, ಸೋಮಶೇಖರ ಹೊಸಮನಿ, ಜಗನ್ನಾಥ ಪಾಟೀಲ್ ಇದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಬಿಬ್ಬಳ್ಳಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಸೇಡಂ: ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಆಸಕ್ತಿವಹಿಸುತ್ತಿದ್ದು, ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಕೆಲಸ ಮಾಡುತ್ತಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಬಿಬ್ಬಳ್ಳಿಯಲ್ಲಿ 2.5 ಕೋಟಿ ರೂ. ವೆಚ್ಚದ ಸೇಡಂ-ನಿಡಗುಂದಾ ಮುಖ್ಯರಸ್ತೆಯಿಂದ ಬಿಬ್ಬಳ್ಳಿ ಗ್ರಾಮದವರೆಗೆ ರಸ್ತೆ ಹಾಗೂ ತರನಳ್ಳಿಯಲ್ಲಿ ಕೂಡು ರಸ್ತೆಗೆ ಸಿಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ನಾನು 2000ರಲ್ಲಿ ಜಿಪಂ ಸದಸ್ಯನಾಗಿ ಆಯ್ಕೆಯಾದಾಗ ಗ್ರಾಮದ ಜನತೆ ಅನೇಕ ಸಮಸ್ಯೆ ನನ್ನ ಗಮನಕ್ಕೆ ತಂದಿದ್ದರು. ಆದ್ಯತೆ ಮೇರೆಗೆ ಎಲ್ಲವನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಇದೀಗ ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿ ಹಿಂದೆಯೂ ನಾನೇ ರಸ್ತೆ ನಿರ್ಮಿಸಿದ್ದು, ಇದೀಗ ಹಾಳಾಗಿರುವುದರಿಂದ ಮತ್ತೆ ಕಾಮಗಾರಿ ನಡೆಸಲಾಗುತ್ತಿದೆ. ಸಂಪೂರ್ಣ ಗ್ರಾಮದವರೆಗೆ ರೋಡ್ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ಅದನ್ನು ಮಂಜೂರುಗೊಳಿಸಲಾಗುವುದು ಎಂದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು.
ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ, ಟಿಎಪಿಸಿಎಂ ಮಾಜಿ ಅಧ್ಯಕ್ಷ ಮಹೇಶ ಪಾಟೀಲ್ ತರನಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಪ್ರಮುಖರಾದ ಸೋಮಶೇಖರ ಹೊಸಮನಿ, ಜಗನ್ನಾಥ ಪಾಟೀಲ್, ಬಸವರಾಜ ಹೊಸಮನಿ, ಚನ್ನಬಸಪ್ಪ ಹಾಗರಗಿ, ನಾಗರಾಜ ಪಾಟೀಲ್ ಕಾಚೂರ, ಸತೀಶ ಪೂಜಾರಿ, ಚಂದ್ರಕಾಂತ ಪಾಟೀಲ್, ತಿಪ್ಪಣ್ಣ, ಸೋಮಶೇಖರ ಯಂಪಳ್ಳಿ, ಕಿರಣ ಪಾಟೀಲ್, ಸಿದ್ರಾಮ ಅಣಕಲ್ ಇತರರಿದ್ದರು.