ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ 
ರಾಜ್ಯ

ಡಿಕೆಶಿ ಪ್ರಮಾಣವಚನಕ್ಕೂ ಮುನ್ನ ಸಿದ್ದರಾಮಯ್ಯನವರಿಗೆ ಮಹತ್ವದ ಹುದ್ದೆ ನೀಡಿದ ಕಾಂಗ್ರೆಸ್: CWC ಸದಸ್ಯರಾಗಿ ನೇಮಕ | Siddaramaiah

ನವದೆಹಲಿ: ಕರ್ನಾಟಕದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ​, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(Siddaramaiah) ಮಹತ್ವದ ಹುದ್ದೆ ನೀಡಿರುವ ಕಾಂಗ್ರೆಸ್, ಪಕ್ಷದ ಅತ್ಯುನ್ನತ ಹಾಗೂ ಪ್ರಮುಖ ನಿರ್ಧಾರ ಕೈಗೊಳ್ಳುವ ಸಮಿತಿ ಎಂದೇ ಪರಿಗಣಿಸಲ್ಪಟ್ಟಿರುವ ಸಿಡಬ್ಲ್ಯೂಸಿ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯನವರಿಗೆ ರಾಜ್ಯಸಭೆಗೆ ಬರುವಂತೆ ಹೈಕಮಾಂಡ್ ಆಹ್ವಾನಿಸಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು. ತಮಗೆ ರಾಷ್ಟ್ರರಾಜಕಾರಣದ ಬಗ್ಗೆ ಆಸಕ್ತಿಯಿಲ್ಲ. ರಾಜ್ಯದಲ್ಲೇ ರಾಜಕಾರಣ ಮಾಡುವುದಾಗಿ ಹೇಳಿದ್ದರು.
ಆದರೆ ಇದೀಗ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಹಿರಿತನವನ್ನು ಪರಿಗಣಿಸಿ ಹೈಕಮಾಂಡ್ ಹೊಸ ಜವಾಬ್ದಾರಿ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಕ್ಷಣದಿಂದ ಜಾರಿಗೆ ಬರುವಂತೆ ಸಿದ್ದರಾಮಯ್ಯನವರನ್ನು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಕುರಿತು ಜೂ.2ರಂದು ಪ್ರಕಟಣೆ ಹೊರಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘಟನೆ ಮತ್ತು ಪ್ರಮುಖ ಕಾರ್ಯತಂತ್ರಗಳ ರೂಪಿಸುವಿಕೆಯಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ (ಏಜೆನ್ಸೀಸ್).