ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ
ಬೆಂಗಳೂರು: ಕಾರ್ಮಿಕರಿಗೆ ನ್ಯಾಯ ಸಿಕ್ಕರೇ ಆಗ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ. ಕಾರ್ಮಿಕರ ಕಾಳಜಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಚಿಂತೆ ಇಲ್ಲ. ಇಲ್ಲಿಯವರೆಗೂ ಅವರಿಗಾಗಿ ಉತ್ತಮ ಯೋಜನೆಯೇ ಜಾರಿಗೆ ತಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಾರ್ಮಿಕರ ಬೆವರಿನಿಂದ ನಮ್ಮ ಬದುಕು ಮತ್ತು ದೇಶದ ಅಭಿವೃದ್ಧಿಯಾಗುತ್ತಿದೆ. ಅವರಿಗೆ ಜಾತಿ, ಧರ್ಮ ಯಾವುದು ಇಲ್ಲ. ಕಾರ್ಮಿಕರದ್ದೇ ಒಂದು ಜಾತಿ ಇದೆ. ಶ್ರಮ, ಬೆವರು ನಿಮ್ಮಜಾತಿ ಎಂದು ಕಾರ್ಮಿಕರನ್ನು ಡಿ.ಕೆ. ಶಿವಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಗಿಗ್ ವರ್ಕಸ್‌ಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ವಿಶೇಷ ಕಾಯ್ದೆಯೇ ರೂಪಿಸಲಾಗಿದೆ. ಅವರ ಕುಟುಂಬಕ್ಕೆ ಅನುಕೂಲ ಆಗುವಂತೆ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ಆರೇಳು ಸಾವಿರ ರೂ. ಸಿಗುತ್ತಿದೆ. ಕಾರ್ಮಿಕರ ಮಕ್ಕಳ ಭವಿಷ್ಯ ರೂಪಿಸಲು ಕಾಂಗ್ರೆಸ್ ಸರ್ಕಾರ ನಿಂತಿದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.