ರಾಜ್ಯ

ಪ್ರಾಬಲ್ಯ ಮೆರೆದ ಕಾಂಗ್ರೆಸ್ ಮಂಕಾದ ದೋಸ್ತಿಪಡೆ ೨೪ನೇ ಅವಧಿಗೆ ನೂತನ ಸಾರಥಿಗಳು ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಅಜ್ಮಲ್ ಗೋಲಾ ಕಲಬುರಗಿ ನೂತನ ಮೇಯರ್, ಫರ್ಹಾನ್ ಉಪಮೇಯರ್
ಕಲಬುರಗಿ: ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಅಜ್ಮಲ್ ಗೋಲಾ ಹಾಗೂ ಉಪಮೇಯರ್ ಆಗಿ ಫರ್ಹಾನ್ ಖುಸ್ರೋ ಜಹಾಗೀರದಾರ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಗದ್ದುಗೆ ಹಿಡಿಯುವುದರ ಮೂಲಕ ಬಿಜೆಪಿ-ಜೆಡಿಎಸ್ ದೋಸ್ತಿಗೆ ಹೊಡೆತ ನೀಡಿದಂತಗಾಗಿದೆ.
ತೀವ್ರ ಕುತೂಹಲ ಕೆರಳಿಸುವುದರ ಜತೆಗೆ ಜಿದ್ದಾಜಿದ್ದಿನ ಕಣವಾಗಿತ್ತು. ೨೦ನೇ ವಾರ್ಡ್ ಸದಸ್ಯ ಗೋಲಾ ಮೇಯರ್ ಆಗುವ ಮೂಲಕ ಉತ್ತರ ಕ್ಷೇತ್ರದ ಶಾಸಕಿ ಕನ್ನಿಜ್ ಫಾತಿಮಾ ಮೇಲುಗೈ ಸಾಧಿಸಿದ್ದಾರೆ.
ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿತ್ತು. ಹೇಗಾದರೂ ಸರಿ ಅಧಿಕಾರ ಗದ್ದುಗೆ ಏರಬೇಕಾಗಿತ್ತು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಡೆ ಸೇರಿಕೊಂಡು ಮಾಡಿದ ಪ್ಲಾನ್ ವರ್ಕೌಟ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಡಾ.ಅಜಯ ಧರ್ಮಸಿಂಗ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಉತ್ತರ ಶಾಸಕಿ ಕನ್ನಿಜ್ ಫಾತಿಮಾ ಇಸ್ಲಾಂ ಇತರರು ಕೂಡಿಕೊಂಡು ಮಾಡಿದ್ದ ತಂತ್ರದ ಫಲಿಸಿದೆ.
ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಘೋಷಣೆಯಾಗುತ್ತಲೇ ಕಾರ್ಯಕರ್ತರು ಸಂಭ್ರಮಿಸಿದರು. ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಕನ್ನಿಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇತರರು ಅಭಿನಂದಿಸಿದರು.