CLP 
ರಾಜ್ಯ

ಸಿದ್ದು ರಾಜೀನಾಮೆ ಬೆನ್ನಲ್ಲೇ ಸರ್ಕಾರ ರಚನೆ ಕಸರತ್ತು: ನಾಳೆ ಸಂಜೆ CLP ಸಭೆ!

ಬೆಂಗಳೂರು: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ರಾಜಧಾನಿಯಲ್ಲಿ ಮುಂದಿನ ನೂತನ ಸರ್ಕಾರ ರಚನೆಯ ಹೈ-ವೋಲ್ಟೇಜ್ ಚಟುವಟಿಕೆಗಳು ಗರಿಗೆದರಿವೆ. ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಾರಥಿ ಯಾರು ಎಂಬ ಕುತೂಹಲಕ್ಕೆ ತೆರೆ ಎಳೆಯಲು ಶನಿವಾರ ಸಂಜೆ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ’ (CLP) ಮಹತ್ವದ ಸಭೆಯನ್ನು ಕರೆಯಲಾಗಿದೆ. ಅಂದೇ ಹೊಸ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.
ಅಧಿಕಾರ ಹಂಚಿಕೆಯ ಒಪ್ಪಂದದಂತೆ ಸಿದ್ದರಾಮಯ್ಯ ಅವರು ಗಾದಿ ಬಿಟ್ಟ ಬೆನ್ನಲ್ಲೇ, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಳೆ ಸಂಜೆ ನಡೆಯಲಿರುವ ಸಿಎಲ್‌ಪಿ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಅಂತಿಮ ಮೊಹರು ಒತ್ತಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ರಾಜಧಾನಿ ಬೆಂಗಳೂರಿನತ್ತ ಧಾವಿಸುತ್ತಿದ್ದು, ರಾಜಕೀಯ ಕಾರಿಡಾರ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ. ಇನ್ನು 24 ಗಂಟೆಗಳಲ್ಲಿ ಕರ್ನಾಟಕದ ನೂತನ ಸಿಎಂ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಇದೆ.

ಮುಹೂರ್ತದ ಮೇಲೆ ಡಿಕೆಶಿ ಕಣ್ಣು!

ಹೈಕಮಾಂಡ್ ಸೂತ್ರದ ಪ್ರಕಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಖಚಿತಪಡಿಸಿವೆ. ಶನಿವಾರವೇ ಎಲ್ಲ ಪ್ರಕ್ರಿಯೆಗಳು ಮುಗಿಯಲಿದ್ದರೂ, ಶಿವಕುಮಾರ್ ಅವರಿಗೆ ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇರುವುದರಿಂದ ಶನಿವಾರದ ಬದಲು ‘ಶುಭ ಮುಹೂರ್ತ’ ನೋಡಿಕೊಂಡು ಭಾನುವಾರ ಪ್ರಮಾಣ ವಚನ ಸ್ವೀಕರಿಸಲು ಬಯಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಮಾಣ ವಚನ ಸಮಾರಂಭ ಭಾನುವಾರಕ್ಕೆ ನಿಗದಿಯಾಗುವ ಸಾಧ್ಯತೆ ದಟ್ಟವಾಗಿದೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ

ಒಂದೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಹೊಸ ಮುಖ್ಯಮಂತ್ರಿಯ ಜೊತೆಗೆ ಸಂಪೂರ್ಣ ಸಚಿವ ಸಂಪುಟ ರಚನೆಗೂ ಹಸಿರು ನಿಶಾನೆ ನೀಡಿದರೆ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲೇ ಈ ಐತಿಹಾಸಿಕ ಪ್ರಮಾಣ ವಚನ ಸಮಾರಂಭ ಜರುಗಲಿದೆ ಎನ್ನಲಾಗಿದೆ.