ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು 
ರಾಜ್ಯ

ಸಂಘಟನೆ ಹೆಸರಿನಲ್ಲಿ ಸಂಘರ್ಷಗಳು ನಡೆಯಬಾರದು: ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಸಲಹೆ-Sri Rambhapuri Veerasomeshwara Jagadgurugalu

ಬೆಂಗಳೂರು: ಭಾರತ ದೇಶವು ಹಲವಾರು ಧರ್ಮ, ಸಂಪ್ರದಾಯ ಹಾಗೂ ಪರಂಪರೆಗಳ ನಾಡು. ಸಮಾಜದಲ್ಲಿ ಉತ್ತಮ ಸಂಘಟನೆಗಳು ಬೆಳೆದು ಬರುವ ಅವಶ್ಯಕತೆ ಇದೆ. ಆದರೆ, ಸಂಘಟನೆ ಹೆಸರಿನಲ್ಲಿ ಸಂಘರ್ಷಗಳು ನಡೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ  ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 
ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ  ಭಾನುವಾರ ಆಯೋಜಿಸಿದ್ದ   ‘ಜನಜಾಗೃತಿ ಧರ್ಮ’ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಜ್ಜನರ ಅವಶ್ಯಕತೆ ಬಹಳಷ್ಟಿದೆ.  ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ನೀತಿ ಸಂಹಿತೆ ಇಲ್ಲದ ಕಾರಣ ಮನುಷ್ಯ ದಾರಿ ತಪ್ಪುತ್ತಿದ್ದಾನೆ.  ಹುಟ್ಟುತ್ತಲೇ ಯಾರೂ ಅಯೋಗ್ಯರಲ್ಲ, ಸೂಕ್ತ ಸಂಸ್ಕಾರ ದೊರೆತರೆ ಎಲ್ಲರೂ ಯೋಗ್ಯರಾಗಬಲ್ಲರು. ಸೌಹಾರ್ದಯುತ ಸಹಬಾಳ್ವೆ ಜೀವನದ ಉಸಿರಾಗಬೇಕು. ಖಾದಿ, ಖಾಕಿ,ಕಾವಿ ಜನಾಂಗವು ನಿರ್ಮಲ ಮನಸ್ಸಿನಿಂದ ಒಗ್ಗಟ್ಟಿನಿಂದ ಶ್ರಮಿಸಿದರೆ ಲೋಕ ಕಲ್ಯಾಣ ಸಾಧ್ಯ. ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರವು ಆದರ್ಶ ಮಾನವರನ್ನು ಸೃಷ್ಟಿಸುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತ ಹಾಗೂ 12ನೇ ಶತಮಾನದ ಬಸವಾದಿ ಶರಣರ ಶ್ರಮವನ್ನು ಸಮಾಜ ಬಾಂಧವರು ಮರೆಯಬಾರದು ಎಂದು ಶ್ರೀಗಳು ಸಲಹೆ ನೀಡಿದರು. 
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ, ನೈತಿಕ ಮೌಲ್ಯಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಇಂದು ಮನುಷ್ಯನಲ್ಲಿ ತಾಳ್ಮೆ ಮತ್ತು ಸಹನೆ ಇಲ್ಲದಿರುವುದೇ ಅಶಾಂತಿ, ಅತೃಪ್ತಿಗಳಿಗೆ ಕಾರಣವಾಗಿದೆ. ಮನೆ ಮನಗಳಲ್ಲಿ ಒಗ್ಗಟ್ಟು ಮೂಡಿದರೆ ಸಾಧನೆ ಮಾಡಲು ಸಾಧ್ಯ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಜನಜಾಗೃತಿ ಮಾಡುತ್ತಾ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸುತ್ತಿರುವುದು ಸಂತಸದ ಸಂಗತಿ ಎಂದರು. 
ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಇಂದು ಸಂಘಟನೆ ಮತ್ತು ಸಾಮರಸ್ಯ ಬೆಳೆದು ಬರುವ ಅನಿವಾರ್ಯತೆ ಇದೆ. ಜಾತಿಯ ಜಾಡ್ಯ ತೊಲಗಿ ಸಹೋದರತೆ ಬೆಳೆದು ಬರಬೇಕಾಗಿದೆ. ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣುಗಳಾಗಿದ್ದು, ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಾದಿ ಶರಣರ ವಿಚಾರಧಾರೆಗಳು ಒಂದೇ ಆಗಿವೆ. ಅವುಗಳ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಸಲಹೆ ನೀಡಿದರು. 
ಉಚಿತ ಆರೋಗ್ಯ ಶಿಬಿರದಲ್ಲಿ ಹೃದಯ ತಜ್ಞ ಡಾ.ಮಹಾಂತೇಶ ಚರಂತಿಮಠ ಮತ್ತು ವೈದ್ಯರ ತಂಡವು 200ಕ್ಕೂ ಅಧಿಕ ಜನರಿಗೆ ಉಚಿತವಾಗಿ ರಕ್ತ ಪರೀಕ್ಷೆ, ಇಕೋ, ಇಸಿಜಿ ತಪಾಸಣೆ ನಡೆಸಿ ಔಷಧಗಳು ಮತ್ತು ವೈದ್ಯಕೀಯ ಸಲಹೆ ನೀಡಿತು. ದಾಸರಹಳ್ಳಿ ನಂಜುಂಡಯ್ಯ, ಪಿ.ಎಸ್. ಸಿದ್ದಗಂಗಯ್ಯ, ಎ.ಎಸ್. ಆನಂದಪ್ಪಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು.   ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಪೂಜಾ ಸಮಿತಿ ಅಧ್ಯಕ್ಷ ಟಿ.ಎಸ್. ಉಮಾಶಂಕರ, ಕನ್ನಡ ಹೋರಾಟಗಾರ ಫಾಲನೇತ್ರ, ಪ್ರದೀಪ ಕಂಕನವಾಡಿ, ಡಾ. ಪಿಕೆಎಂ ಪ್ರಶಾಂತ್ ಮತ್ತು ಹಾಲ್ವೇನು ವೀರಭದ್ರಯ್ಯ  ಸೇರಿ ಹಲವರು ಉಪಸ್ಥಿತರಿದ್ದರು.
ವೀರಶೈವ ಧರ್ಮ ವಿಶ್ವ ಧರ್ಮವಾಗಿದೆ. ಜ್ಞಾನ ಕ್ರಿಯಾತ್ಮಕವಾದ ಧರ್ಮಾಚರಣೆಯಿಂದ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಮೂಡುತ್ತದೆ. 
 - ನಾಗಲಾಪುರದ ತೇಜೇಶ್ವರಲಿಂಗ ಶಿವಾಚಾರ್ಯರು. 
ವೀರಶೈವ ಲಿಂಗಾಯತ ಸಮಾಜವು ಒಳ ಪಂಗಡಗಳನ್ನು ಮರೆತು ಒಂದಾಗಬೇಕು. ಭೌತಿಕ ಬದುಕಿನೊಂದಿಗೆ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಜಾಗೃತಗೊಳಿಸುವ ಶಕ್ತಿ ಬೆಳೆಸಿಕೊಳ್ಳಬೇಕು.
- ಶ್ರೀ ವೀರಭದ್ರ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರ.