ಗುಲ್ಬರ್ಗ ವಿವಿ ಸೂಕ್ಷ್ಮಜೀವಶಾಸ್ತ್ರ ವಿಭಾಗ ಶುಕ್ರವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ್, ಸಂಯೋಜಕಿ ಪ್ರೊ.ಎಂ.ಬಿ.ಸುಲೋಚನಾ, ಪ್ರೊ.ಚಂದ್ರಕಾಂತ ಕೆಳಮನಿ, ಪ್ರೊ.ಎಸ್.ಎ. ಪಾಟೀಲ್, ಪ್ರೊ.ಮೆಂಜಿ ಇತರರಿದ್ದರು.
- ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಅಗಸರ್ ಅನಿಸಿಕೆ
- ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸುವರ್ಣ ಮಹೋತ್ಸವ
ಕಲಬುರಗಿ: ಯುವ ಜನಾಂಗದ ಶೈಕ್ಷಣಿಕ ಕಲಿಕೆ ಮತ್ತು ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕವಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ್ ಶ್ಲಾಘಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ವರ್ಷಾಚರಣೆ ಮತ್ತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸತನದ ಆಲೋಚನೆ ಮತ್ತು ದೂರದೃಷ್ಟಿ ಮೂಲಕ ನಾವೆಲ್ಲರೂ ವಿಭಾಗದ ಏಳಿಗೆಗೆ ಶ್ರಮಿಸಿ ಮುಂದಿನ 75 ವರ್ಷಗಳ ಸಂಭ್ರಮಾಚರಣೆಗೆ ನಾಂದಿ ಹಾಡಬೇಕಿದೆ. ಹಳೆಯ ವಿದ್ಯಾರ್ಥಿಗಳ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳ ಸಂಘಕ್ಕೆ ನೇಮಕಗೊಂಡಿರುವ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಬೆಂಗಳೂರು ನಿಮಾನ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎ.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂತಹ ಸಮ್ಮೇಳನ, ಕಾರ್ಯಾಗಾರ, ಸಂಕಿರಣ, ಉಪನ್ಯಾಸಗಳಿಂದ ಇತ್ತೀಚಿನ ಬೆಳವಣಿಗೆ ಕುರಿತು ಚರ್ಚಿಸಲು ವೇದಿಕೆಗಳಾಗುತ್ತವೆ. ಗ್ರಹಿಕೆ, ಕಲಿಕೆ. ಚಿಂತನ-ಮಂಥನದ ಮೂಲಕ ಅತ್ಯುತಮ ಅನುಭವ ಸಿಗುತ್ತವೆ. ಜ್ಞಾನ ಗಳಿಕೆಗೆ ಯಾವುದೇ ಮಿತಿಯಿಲ್ಲ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಕೆ.ಲಿಂಗಪ್ಪ ಮಾತನಾಡಿ, ಸುವರ್ಣ ಮಹೋತ್ಸವ ಮತ್ತು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವುದು ನವಚೈತನ್ಯ ಬಂದಂತಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಉದಾರ ಮನದ ಸಹಾಯದಿಂದ ಈ ಸಂಭ್ರಮ ವಿಭಾಗದ ಸಾಧನೆಯ ಮೈಲಿಗಲ್ಲು ಹಂಚಿಕೊಳ್ಳುವ ಸೌಭಾಗ್ಯ ನಮಗೆ ದೊರೆತಿದೆ ಎಂದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ.ಅನ್ನಪೂರ್ಣ ನಿಂಬರಗಿ ಅನುಭವ ಭಾವನಾತ್ಮಕ ನುಡಿಗಳಲ್ಲಿ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಪ್ರೊ.ಎಂ.ಬಿ.ಸುಲೋಚನಾ ಮಾತನಾಡಿದರು. ಪ್ರೊ.ಚಂದ್ರಕಾಂತ ಕೆಳಮನಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸಿದ ಸಂಶೋಧಕರಿಗೆ ಬೆಸ್ಟ ಓರಲ್ ಪ್ರಸೆಂಟೇಷನ್ ಮತ್ತು ಬೆಸ್ಟ್ ಪೋಸ್ಟರ್ ಪ್ರೆಸೆಂಟೇಷನ್ ಅವಾರ್ಡ್ ನೀಡಲಾಯಿತು. ಕೆಬಿಎನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ತಸ್ಲಿಮ್ ಬಾನು ಸಮ್ಮೇಳನ ಕುರಿತು ಅನಿಸಿಕೆ ಹಂಚಿಕೊಂಡರು. ಪ್ರೊ.ಯಶವಂತರಾವ್ ಮೆಂಜಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಡಾ.ಸುದರ್ಶನ ವಂದಿಸಿದರು.
ಸೂಕ್ಷ್ಮಜೀವಶಾಸ್ತ್ರ ವಿಭಾಗ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನದ ಯಶಸ್ವಿಯಾಗಿ ಜರುಗಿತು. ದೇಶದ ವಿವಿಧ ಭಾಗಗಳಿಂದ ಖ್ಯಾತ ವಿಜ್ಞಾನಿಗಳು ಸಂಶೋಧಕರ ಮೌಖಿಕ ಮತ್ತು ಪೋಸ್ಟರ್ ಪ್ರಬಂಧ ಮಂಡಿಸಿ ವಿದ್ವಾಂಸರ ಮೆಚ್ಚುಗೆ ಪಡೆದರು. ಸೂಕ್ಷ್ಮಜೀವ ವಿಜ್ಞಾನ ಒಳಗೊಂಡ ಬಹುಶಿಸ್ತೀಯ ವಿಷಯಗಳ ವೈಜ್ಞಾನಿಕ ಚಿಂತನೆ, ಅಡ್ವಾನ್ಸ್ಡ ಟೆಕ್ನಾಲಜಿಗಳ ಕುರಿತು ಮಾಹಿತಿ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಅಳವಡಿಕೆಗೆ ಪೂರಕವಾಯಿತು. ಸಮ್ಮೇಳನದಲ್ಲಿ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ 20 ವಿಜ್ಞಾನಿಗಳು ಉಪನ್ಯಾಸ ನೀಡಿದರು. 30 ಸಂಶೋಧನಾ ಲೇಖನಗಳು ಸ್ವೀಕೃತಗೊಂಡವು.
"
ಜ್ಞಾನ ಗಳಿಕೆಗೆ ಯಾವುದೇ ಮಿತಿ ಇಲ್ಲ. ಜ್ಞಾನದ ಮೂಲಕ ವ್ಯಕ್ತಿತ್ವ, ಕುಶಲತೆ, ಕೌಶಲ, ಅನುಭವದಿಂದ ಜಾಗತಿಕ ಮಟ್ಟದಲ್ಲಿ ಉತ್ತಮ ಅವಕಾಶ ಪಡೆಯಬಹುದು.
— ಪ್ರೊ.ಎಸ್.ಎ.ಪಾಟೀಲ್, ನಿವೃತ್ತ ಪ್ರಾಧ್ಯಾಪಕ, ನಿಮಾನ್ಸ್, ಬೆಂಗಳೂರು.