Conductor turns bus back for a friend! 
ರಾಜ್ಯ

ಸ್ನೇಹಿತನಿಗಾಗಿ ಬಸ್​ ವಾಪಸ್​ ತಿರುಗಿಸಿದ ಕಂಡಕ್ಟರ್​!

ಚಿಂತಾಮಣಿ : ಸರ್ಕಾರಿ ಬಸ್​ ಸಾರ್ವಜನಿಕ ಸೇವೆಗೆ ಮೀಸಲಿರಬೇಕು. ಆದರೆ ಇಲ್ಲೊಬ್ಬ ಕೆಎಸ್​ಆರ್​ಟಿಸಿ ಕಂಡಕ್ಟರ್​ ತನ್ನ ಸ್ನೇಹಿತನಿಗಾಗಿ ಚಾಲಕನ ವಿರೋಧದ ನಡುವೆಯೂ ಬಸ್ಸನ್ನೇ ಅರ್ಧದಾರಿಯಿಂದ ವಾಪಸ್​ ತಿರುಗಿಸಿ ಯನಮಲಪಾಡಿ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.
ಶುಕ್ರವಾರ ಬೆಳಗ್ಗೆ 8.35ಕ್ಕೆ ಯನಮಲಪಾಡಿಯಿಂದ ಚಿಂತಾಮಣಿಗೆ ಹೊರಡಬೇಕಿದ್ದ ಬಸ್​ ಪ್ರಯಾಣಿಕರನ್ನು ಹತ್ತಿಸಿಕೊಂಡು 8.55ಕ್ಕೆ 4 ಕಿಲೋಮೀಟರ್​ ದೂರದ ಮುಂಗಾನಹಳ್ಳಿ ತಲುಪಿತ್ತು. ಈ ವೇಳೆ ಯನಮಲಪಾಡಿ ಗ್ರಾಮದ ಸಿರೀಶ್​ ತನಗೆ ಬಸ್​ ಹತ್ತಲು ತಡವಾಗಿದ್ದು, ನೀವು ಮುಂದೆ ಹೋಗಿದ್ದೀರಿ, ದಯವಿಟ್ಟು ಬಸ್​ ವಾಪಸ್​ ತಿರುಗಿಸಿಕೊಂಡು ಬನ್ನಿ ಎಂದು ನಿರ್ವಾಹಕ ವೆಂಕಟೇಶ್​ಗೆ ಕರೆ ಮಾಡಿ ಕೇಳಿಕೊಂಡಿದ್ದಕ್ಕೆ ನಿಯಮ ಗಾಳಿಗೆ ತೂರಿ ಮುಂಗಾನಹಳ್ಳಿಗೆ ಹೋಗಿದ್ದ ಬಸ್​ ಅನ್ನು ಚಾಲಕನ ಮೇಲೆ ಒತ್ತಡ ಹಾಕಿ ವಾಪಸ್​ ಯನಮಲಪಾಡಿಗೆ ತಿರುಗಿಸಿಕೊಂಡು ಬಂದಿದ್ದಾರೆ.
ಶಾಲಾ ಮಕ್ಕಳಿಗೆ ಸಂಕಷ್ಟ: ಸಮಯಕ್ಕೆ ಸರಿಯಾಗಿ ಶಾಲಾ&ಕಾಲೇಜು ಹಾಗೂ ಕಚೇರಿಗಳಿಗೆ ತಲುಪಬೇಕಾಗಿದ್ದ ಪ್ರಯಾಣಿಕರು ನಿರ್ವಾಹಕನ ಬೇಜವಾಬ್ದಾರಿ ನಡವಳಿಕೆಯಿಂದ ಅರ್ಧದಾರಿಯಲ್ಲೇ ತೊಂದರೆ ಅನುಭವಿಸುವಂತಾಯಿತು. ಒಬ್ಬನೇ ಒಬ್ಬ ಸ್ನೇಹಿತನಿಗಾಗಿ ಬಸ್​ ಅನ್ನೇ ವಾಪಸ್​ ತಂದಿದ್ದರಿಂದ ಶಾಲಾ ಮಕ್ಕಳು ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡಿದರು.
ಡಿಪೋ ವ್ಯವಸ್ಥಾಪಕರಿಗೆ ದೂರು
ನಿರ್ವಾಹಕ ವೆಂಕಟೇಶ್​ ವರ್ತನೆಯಿಂದ ಆಕ್ರೋಶಗೊಂಡ ಯನಮಲಪಾಡಿ ಹಾಗೂ ಮುಂಗಾನಹಳ್ಳಿ ಭಾಗದ ಗ್ರಾಮಸ್ಥರು ಒಟ್ಟಾಗಿ ಚಿಂತಾಮಣಿ ಕೆಎಸ್​ಆರ್​ಟಿಸಿ ಡಿಪೋ ವ್ಯವಸ್ಥಾಪಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಸಾರ್ವಜನಿಕರ ತೆರಿಗೆಯಲ್ಲಿ ನಡೆಯುವ ಸಾರಿಗೆ ಸಂಸ್ಥೆಯನ್ನು ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಯನಮಲಪಾಡಿ ಗ್ರಾಮಸ್ಥ ಮಂಜುನಾಥ್​, ವೆಂಕಟೇಶ್​, ಜಗದೀಶ್​, ರಮೇಶ್​, ಮಹದೇವ್​, ಅಮೃತ ರಾಜ್​, ಗಿರೀಶ್​, ಬಾಬಾಜಾನ್​ ಸೇರಿ ಹಲವರು ಕೆಎಸ್​ಆರ್​ಟಿಸಿ ಟಕದ ವ್ಯವಸ್ಥಾಪಕರಿಗೆ ದೂರು ನೀಡಿದರು.