- ಏ.23 ಮತ್ತು 24ಕ್ಕೆ ಸಿ.ಇ.ಟಿ ಪರೀಕ್ಷೆ
ಕಲಬುರಗಿ: ಇಂಜಿನಿಯರಿಂಗ್ ಇತರೆ ವೃತ್ತಿ ಶಿಕ್ಷಣ ಪ್ರವೇಶಾತಿಗೆ ಏಪ್ರಿಲ್ 23 ಮತ್ತು 24 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಲಬುರಗಿ
ನಗರದ 35 ಕೇಂದ್ರಗಳಲ್ಲಿ ಸಿ.ಇ.ಟಿ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಸುಸೂತ್ರವಾಗಿ ನಡೆಸುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸೂಚನೆ ನೀಡಿದರು.
ಪರೀಕ್ಷೆ ದಿನದ ಮುನ್ನವೆ ಕೇಂದ್ರದಲ್ಲಿ ಆಸನ ವ್ಯವಸ್ಥೆ, ವಿದ್ಯುತ್ ,ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದಂತಹ ಮೂಲಸೌಕರ್ಯ ಇರುವುದನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳಬೇಕು. ಪ್ರವೇಶ ದ್ವಾರದಲ್ಲಿಯೆ ಪೊಲೀಸ್ ಸಿಬ್ಬಂದಿ ಸಹಾಯ ಪಡೆದು ಅಭ್ಯರ್ಥಿಗಳಿಗೆ ಫ್ರಿಸ್ಕಿಂಗ್ ಮಾಡಬೇಕು. ಪ್ರಿಸ್ಕಿಂಗ್ ಸಮಯದಲ್ಲಿ ಅಭ್ಯರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದ ಅವರು, ಇನ್ನು ಪರೀಕ್ಷಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಐ.ಡಿ ಕಾರ್ಡ್ ತರುವುದನ್ನು ಮರೆಯಬಾರದು ಎಂದಿದ್ದಾರೆ.
ಪರೀಕ್ಷೆಯು ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ನಡೆಯಲಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಕ್ಯಾಮೆರಾ ಅಲವಡಿಸಲಾಗುತ್ತಿದೆ. ಇನ್ನು ಕೇಂದ್ರಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಪಂಚಾಯತ್ ಸಿ.ಇ.ಓ ನೇತೃತ್ವದಲ್ಲಿ ತಂಡಗಳು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಿವೆ. ಎಲ್ಲಿಯೇ ಅಕ್ರಮ ನಡೆದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಡಿಸಿ ರಾಯಪ್ಪ ಎಚ್ಚರಿಕೆ ನೀಡಿದರು.
ಪರೀಕ್ಷೆ ಕೇಂದ್ರದಲ್ಲಿ ಮೊಬೈಲ್, ಬ್ಲೂಟೂಥ್, ಪೇಜರ್, ಕ್ಯಾಲ್ಕುಲೇಟರ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ ಕೇಂದ್ರದಲ್ಲಿ 200 ಮೀಟರ್ ಸುತ್ತ ಪ್ರದೇಶ ನಿಷೇಧಿತ ಪ್ರದೇಶವೆಂದು ಈಗಾಗಲೆ ಘೋಷಿಸಲಾಗಿದ್ದರಿಂದ ಪೊಲೀಸ್ ಇಲಾಖೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಸುರೇಶ ಅಕ್ಕಣ್ಣ ಸೇರಿದಂತೆ ಇತರೆ ಅಧಿಕಾರಿಗಳು, ಪರೀಕ್ಷೆ ಕೇಂದ್ರದ ಮುಖ್ಯಸ್ಥರು ಭಾಗವಹಿಸಿದ್ದರು.