ದೊಡ್ಡಬಳ್ಳಾಪುರದ ನಗರ ಪೊಲೀಸ್​ ಠಾಣೆ ಮುಂಭಾಗ ಡಿಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಜರಂಗದಳ, ವಿಹಿಂಪ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ರಾಜ್ಯ

ಶ್ರೀರಾಮ ಶೋಭಾಯಾತ್ರೆಗೆ ಷರತ್ತು ಬದ್ಧ ಅನುಮತಿ / DODABALLAPUR

ದೊಡ್ಡಬಳ್ಳಾಪುರ : ಭಾನುವಾರ ನಡೆಯಬೇಕಿದ್ದ ಶ್ರೀರಾಮ ಶೋಭಾಯಾತ್ರೆ ಆಚರಣೆಗೆ ಡಿಜೆ ಬಳಸುವ ಅನುಮತಿ ವಿಚಾರದಲ್ಲಿ ಪೊಲೀಸ್​ ಇಲಾಖೆ ಮತ್ತು ಆಯೋಜಕರಾದ ಬಜರಂಗದಳ, ವಿಹಿಂಪ ಮಧ್ಯೆ ಹೈಡ್ರಾಮ ನಡೆಯಿತು.
ಡಿಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬಜರಂಗದಳ, ವಿಹಿಂಪ ಕಾರ್ಯಕರ್ತರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸಿದರು. ಕೊನೆಗೆ ಶಾಸಕ ಧೀರಜ್​ ಮುನಿರಾಜು, ಹಿರಿಯ ಮುಖಂಡ ಕೆ.ಎಂ. ಹನುಮಂತರಾಯಪ್ಪ ಸಮ್ಮುಖದಲ್ಲಿ ಡಿವೈಎಸ್ಪಿ ಪಾಂಡುರಂಗ, ಇನ್​ಸ್ಪೆಕ್ಟರ್​ ಅಮರೇಶ್​ ಗೌಡ ಮತ್ತು ಬಜರಂಗದಳ, ವಿಹಿಂಪ ಮುಖಂಡರಾದ ನರೇಶ್​ ರೆಡ್ಡಿ, ಭಾಸ್ಕರ್​, ರವಿ ಮಧ್ಯೆ ನಡೆದ ಮಾತುಕತೆಯಲ್ಲಿ ಷರತ್ತುಬದ್ಧ ಅನುಮತಿಗೆ ಆಯೋಜಕರು ಒಪ್ಪಿಕೊಂಡರು.
ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ಜಿಲ್ಲಾಧಿಕಾರಿ ಆದೇಶಾನುಸಾರ ಶೋಭಾಯಾತ್ರೆ ಮಾಡಬೇಕು ಎಂದು ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದ ಆಯೋಜಕರು, ಧೀರಜ್​ ಮುನಿರಾಜು ಜತೆ ಸಮಾಲೋಚನೆ ನಡೆಸಿದರು. ಭಾನುವಾರವೇ ಶೋಭಾಯಾತ್ರೆ ಆಚರಿಸಲು ಸಮ್ಮತಿ ಸೂಚಿಸಿದರು.
ಧೀರಜ್​ ಮುನಿರಾಜು ಮಾತನಾಡಿ, ಕಳೆದ 14 ವರ್ಷಗಳಿಂದ ಶೋಭಾಯಾತ್ರೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಯಾವುದೇ ಅಹಿತಕರ ಟನೆಗಳು ಸಂಭವಿಸಿಲ್ಲ. ಈ ಬಾರಿಯೂ ಅಹಿಕತರ ಟನೆಗೆ ನಾವು ಆಸ್ಪದ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ನಿಬಂಧನೆಗಳು

1. ಶ್ರೀರಾಮನವಮಿ ಪ್ರಯುಕ್ತ ಹಮ್ಮಿಕೊಂಡಿರುವ ಬೈಕ್​ ರಾಲಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ ವಾಹನವನ್ನು ಚಲಾಯಿಸುವುದು.
2. ರ್ಯಾಲಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸುವುದು.
3. ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವಂತಿಲ್ಲ.
4. ವಾಹನಗಳ ದಾಖಲಾತಿ (ಡಿಎಲ್​ ಮತ್ತು ವಿಮೆ ಚಾಲ್ತಿಯಲ್ಲಿ ಇರಬೇಕು.
5. ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಹೇಳಿಕೆ ಮತ್ತು ದ್ವೇಷ ಭಾಷಣ ಮಾಡುವಂತಿಲ್ಲ.
6. ಡಿಜೆ ಬಳಸುವಂತಿಲ್ಲ
7. ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಅಥವಾ ಸ್ಫೋಟಕ ವಸ್ತು ಬಳಕೆ ನಿಷೇಧ.
8. ಶೋಭಾಯಾತ್ರೆಯನ್ನು ನಿಗದಿಪಡಿಸಿರುವ ಮಾರ್ಗದಲ್ಲಿ ಮಾತ್ರ ಶಾಂತಿಯುತವಾಗಿ ಸಂಚರಿಸುವುದು.
9. ನಿಗದಿತ ಸಮಯದಲ್ಲಿ ಮುಕ್ತಾಯ ಮಾಡಬೇಕು.