ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸಚಿವ ಮಧು ಬಂಗಾರಪ್ಪ
- ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳು ಕಾರ್ಯ ನಿರ್ವಹಿಸುವಂತೆ ಮಾಡುವುದು ನನ್ನ ಮೊದಲ ಗುರಿ
- ಮೂರನೇ ತರಗತಿಯಿಂದಲೇ ಎಐ ಶಿಕ್ಷಣ ನೀಡುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ, ಕೆಪಿಎಸ್‌ನಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ
- ದಾಖಲಾತಿ ಪ್ರಮಾಣ ಹೆಚ್ಚಳ ಮಾಡಲು 4,056 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್‌ಕೆಜಿ-ಯುಕೆಜಿ ಆರಂಭಿಸಲಾಗಿದೆ.
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ (2026-27) ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳು ಕಾರ್ಯ ನಿರ್ವಹಿಸುವಂತೆ ಮಾಡುವುದು ನನ್ನ ಮೊದಲ ಗುರಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚವ ಮಧು ಬಂಗಾರಪ್ಪ ತಿಳಿಸಿದರು.
ವಿಜಯವಾಣಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಸಬಲೀಕರಣ, ದಾಖಲಾತಿ, ಕಲಿಕಾ ಗುಣಮಟ್ಟ ಮತ್ತು ಮೂಲ ಸೌಕರ್ಯ ಹೆಚ್ಚಳ ಮಾಡುವ ನಿಟ್ಟನಲ್ಲಿ ರಾಜ್ಯದಲ್ಲಿ ಕೆಪಿಎಸ್ ಆರಂಭಿಸಲಾಗುತ್ತಿದೆ ಎಂದರು.
2019ರಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿದ್ದು, ಇಲ್ಲಿಯವರೆಗೂ ಕೇವಲ 308 ಕೆಪಿಎಸ್ ಶಾಲೆಗಳನ್ನು ಮಾತ್ರ ಆರಂಭಿಸಲಾಗಿದೆ. ಈಗ ಒಂದೇ ಬಾರಿಗೆ ಶಾಲಾ ಶಿಕ್ಷಣದ ವತಿಯಿಂದ 500, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನಿಧಿಯ ಮೂಲಕ 200 ಶಾಲೆಗಳು ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗದಮ (ಸಿಇಪಿಎಂಐಝೆಡ್) ವತಿಯಿಂದ 10 ತಾಲೂಕುಗಳಲ್ಲಿ 100 ಕೆಪಿಎಸ್ ಶಾಲೆಗಣನ್ನು ಉನ್ನತೀಕರಿಸಲು ವಿಸತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ.
ಹಾಗೆಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಆಯ್ದ 100 ಉರ್ದು ಶಾಲೆಗಳನ್ನು ಕೂಡ ಕೆಪಿಎಸ್ ಆಗಿ ಪರಿವರ್ತಿಸಲಾಗುತ್ತಿದೆ. ಇದರ ಜತೆಗೆ ಮತ್ತೆ ಅವಕಾಶ ಮತ್ತು ಅನುದಾನ ಸಿಕ್ಕರೆ ಮತ್ತೆ 100 ಶಾಲೆ ಸೇರಿ ಒಟ್ಟು ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದು ನನ್ನ ಗುರಿಯಾಗಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಸದುದ್ದೇಶ ಹೊಂದಲಾಗಿದೆ ಎಂದರು.
ಒಂದಲೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ
ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ನೀಡುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ, ಕೆಪಿಎಸ್‌ನಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಮಗುವಿಗೆ ಮೊದಲನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಿದಾಗ ಎಲ್ಲವೂ ಅಲ್ಲಿಯೇ ದೊರೆಯಲಿದೆ.
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಮಗುವು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಿದ್ದು, ಮಗುವು ಪ್ರತಿ ಹಂತದಲ್ಲಿ ಶಾಲೆಯಲ್ಲಿ ಬದಲಿಸಬೇಕಿದೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತವಾಗುತ್ತಿದೆ. ಕೆಪಿಎಸ್‌ನಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಕಡೆ ಶಿಕ್ಷಣ ಪಡೆಯುವುದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕೂಡ ಪ್ರಗತಿ ಕಾಣಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
6ನೇ ತರಗತಿಯಿಂದ ಭಾಷಾ ಮಾಧ್ಯಮ ಮಕ್ಕಳ ಆಯ್ಕೆ
ಕೆಪಿಎಸ್ ಶಾಲೆಗಳಲ್ಲಿ ಮತ್ತು ಈಗಾಗಲೇ ದ್ವಿಭಾಷಾ ಮಾಧ್ಯಮ ಬೋಧಿಸುತ್ತಿರುವ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದಲೇ ದ್ವಿಭಾಷಾ ಮಾಧ್ಯಮ ಬೋಧನೆ ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 5ನೇ ತರಗತಿವರೆಗೂ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತದೆ. 6ನೇ ತರಗತಿಯಿಂದ ಬೋಧನಾ ಮಾಧ್ಯಮವನ್ನು ಮಕ್ಕಳ ಆಯ್ಕೆಗೆ ಬಿಡಲಾಗುತ್ತದೆ. ಕನ್ನಡ/ಇಂಗ್ಲಿಷ್ ಯಾವುದೇ ಮಾಧ್ಯಮವನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ತಿಳಿಸಿದರು.
ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಲು ಎಲ್‌ಕೆಜಿ ಆರಂಭ
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳ ಮಾಡಲು 4,056 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ-ಯುಕೆಜಿ) ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಲ್ಲಿ 2,619 ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವುಗಳಲ್ಲಿ 90,195 ಮಕ್ಕಳು ದಾಖಲಾಗಿದ್ದಾರೆ. ಇದೇ ಕಾರಣದಿಂದ 4,056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಆರಂಭಿಸಲಾಗುತ್ತಿದೆ. ಒಬ್ಬ ವಿದ್ಯಾರ್ಥಿಯು ಒಂದೇ ಶಾಲೆಯಲ್ಲಿ 14 ವರ್ಷ ಓದಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಕನ್ನಡ, ಕರ್ನಾಟಕ ಅಸ್ಮಿತೆ ಕಾಪಾಡಲು ರಾಜ್ಯ ಶಿಕ್ಷಣ ನೀತಿ
ಕನ್ನಡ, ಕರ್ನಾಟಕ, ಆಡುಭಾಷೆ, ನಾಡಿನ ಆಚಾರ-ವಿಚಾರಗಳು, ಸಂಸ್ಕೃತಿಯನ್ನು ತಿಳಿಯುವುದಕ್ಕಾಗಿ ರಾಜ್ಯ ಶಿಕ್ಷಣ ನೀತಿ ಅನಿವಾರ್ಯವಾಗಿದೆ. ಹೀಗಾಗಿ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎಸ್‌ಇಪಿ) ಅಳವಡಿಕೆಯಿಂದ ರಾಜ್ಯದ ಮೇಲೆ ಪರಿಣಾಮ ಬೀರಲಿದೆ. ತಮ್ಮದೇ ಆದ ಪಠ್ಯಕ್ರಮ, ಭಾಷಾ ನೀತಿಯನ್ನು ಅಳವಡಿಸಿಕೊಂಡಾಗ ನಮಗೆ ಸ್ವಂತಿಕೆ ಇರಲಿದೆ. ಇದರಿಂದ ರಾಜ್ಯದ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಾಗಲಿದೆ. ಎಲ್ಲ ಆಯಾಮಗಳಲ್ಲಿ ಚರ್ಚಿಸಿಯೇ ಹಾಗೂ ಪ್ರಣಾಳಿಕೆಯಲ್ಲಿ ೋಷಿಸಿದ್ದಂತೆ ರಾಜ್ಯ ಶಿಕ್ಷಣ ನೀತಿ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಸದ್ಯದ ರಾಜಕೀಯ ಬೆಳವಣಿಗೆಗಳು ತಿಳಿಯಾದ ಬಳಿಕ ನೀತಿಯನ್ನು ಅನುಷ್ಠಾನ ಮಾಡುವ ವಿಚಾರಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ನಮ್ಮ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಶೇ.33 ಲಿತಾಂಶ
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ತೇರ್ಗಡೆ ನಿಯಮವನ್ನು ಶೇ.35ರಿಂದ 33ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯದ ಮಕ್ಕಳಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಸಾಕಷ್ಟು ಅನುಕೂಲವಾಗಿದೆ.
ಇಂದು ಭದ್ರತಾ ಸಿಬ್ಬಂದಿ, ನರ್ಸಿಂಗ್ ಸೇರಿ ಹಲವು ಕ್ಷೇತ್ರಗಳಲ್ಲಿ ಹೊರ ರಾಜ್ಯದವರ ಪಾಲಾಗಿದೆ. ಅದೇ ರಾಜ್ಯದ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣರಾದರೆ ಶಾಲೆ ತೊರೆದೆ ಉನ್ನತ ಶಿಕ್ಷಣದತ್ತ ವಾಲುತ್ತಾನೆ. ಹಾಗೆಯೇ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಾಡಿಕೊಂಡ ವಿದ್ಯಾರ್ಥಿಗಳು ನರ್ಸಿಂಗ್, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅನುಕೂಲವಾಗಿದೆ. ಇದನ್ನು ತಿಳಿಯದೆ ಕೆಲವರು ಏನೇನೋ ಮಾತನಾಡುತ್ತಾರೆ. ಅದಕ್ಕೆಲ್ಲ ಕಿವಿಗೊಡಲ್ಲ, ಡೋಂಟ್ ಕೇರ್ ಎಂದರು.
"
ದೇಶದಲ್ಲಿಯೇ ಅತಿಹೆಚ್ಚು ಸಾಕ್ಷರತೆ ಹೊಂದಿರುವ ಕೇರಳದಲ್ಲಿ ಕನಿಷ್ಠ ತೇರ್ಗಡೆ ಅಂಕ ಶೇ.30 ಇದೆ. ಕೇಂದ್ರ ಮತ್ತು ಇತರೆ ರಾಜ್ಯಗಳ ಪಠ್ಯಕ್ರಮದಲ್ಲಿಯೂ ಶೇ.33ಇದೆ. ಹೀಗಿರುವಾಗ ನಮ್ಮ ಮಕ್ಕಳನ್ನು ಏಕೆ ಅವಕಾಶವಂಚಿತರನ್ನಾಗಿಸಬೇಕು ಎಂದು ಪ್ರಶ್ನಿಸಿದ ಸಚಿವರು, ರಾಜ್ಯದಲ್ಲಿ ನಮ್ಮ ಕೆಲಸಗಳನ್ನು ನಮ್ಮ ಮಕ್ಕಳಿಗೇ ದೊರೆಯುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.