Comprehensive investigation into abortion racket
ಚಿಂತಾಮಣಿ: ಮಂಡ್ಯ, ಬೆಂಗಳೂರು ಸೇರಿ ವಿವಿಧ ಪ್ರದೇಶಗಳಲ್ಲಿ ಗರ್ಭಪಾತ ಮಾಡಿಸುವ ಏಜೆಂಟ್ಗಳ ಜಾಲದ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತಾಮಣಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಬೆಟ್ಟಸ್ವಾಮಿ ಹೇಳಿದರು.
ನಗರದ ನಾರೆಪ್ಪಕುಂಟೆ ರಸ್ತೆಯ ನರ್ಸಿಂಗ್ ಹೋಮ್ಗೆ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಏಜೆಂಟ್ ಜಯಲ್ಮ ಎಂಬುವವರು ಗರ್ಭಿಣಿಯರನ್ನು ಸಂಪರ್ಕಿಸಿ ಸ್ಕ್ಯಾನಿಂಗ್ ಸೇರಿ ವೈದ್ಯಕಿಯ ಪರೀಕ್ಷೆಗಳ ಹೆಸರಿನಲ್ಲಿ ಅನಧಿಕೃತ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ. ಬಳಿಕ ಸುಳ್ಳು ಭರವಸೆ ನೀಡಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ ಎಂದರು.
ತನಿಖೆ ಮೂಲಕ ಬಹಿರಂಗ
ದಂಧೆಯಲ್ಲಿ ಭಾಗಿಯಾಗಿರುವ ಏಜೆಂಟ್ಗಳು, ನರ್ಸಿಂಗ್ ಹೋಮ್ ಸಿಬ್ಬಂದಿ ಹಾಗೂ ಇತರ ಸಂಬಂಧಪಟ್ಟವರ ಪಾತ್ರವನ್ನು ತನಿಖೆ ಮೂಲಕ ಬಹಿರಂಗಪಡಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಮೇರೆಗೆ ತನಿಖೆ ನಡೆಸಲು ಇಲ್ಲಿಗೆ ಬಂದಿದ್ದೇವೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಬೆಟ್ಟಸ್ವಾಮಿ ತಿಳಿಸಿದರು.ಪೊಲೀಸ್ ಅಧಿಕಾರಿಗಳು ಹಾಗೂ ಪಿಸಿಪಿಟಿಎನ್ಡಿಟಿ ನೋಡೆಲ್ ಅಧಿಕಾರಿಗಳ ಸಹಕಾರದೊಂದಿಗೆ ಆಡಿಯೋ ಫೈಲ್ಗಳು, ರಿಜಿಸ್ಟರ್ಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ತನಿಖೆ ಮುಂದುವರಿಸಲಿದ್ದಾರೆ ಎಂದು ವಿವರಿಸಿದರು.
ಜಾಲದಲ್ಲಿ ಭಾಗಿಯಾಗಿರುವ ಕೆಲವರು ಮಹಿಳೆಯರಿಂದ ಸುಮಾರು 38 ಸಾವಿರ ರೂ.ಪಡೆದು, ಬೆಂಗಳೂರಿನಲ್ಲಿ ಭೇಟಿಯಾಗುವಂತೆ ಸೂಚಿಸುತ್ತಿದ್ದರು. ನಂತರ ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ನಡೆದ ದೂರವಾಣಿ ಸಂಭಾಷಣೆಗಳ ಆಡಿಯೋ ದಾಖಲೆಗಳು ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಮತ್ತು ಮಂಡ್ಯದಿಂದ ಕರೆತಂದ ಬೆಂಗಳೂರಿನ ಏಜೆಂಟ್ ಜಯಲ್ಮ ಎಂಬುವವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಚೇತನ ಎಚ್.ಸಿ. ವಿಚಾರಣೆ ನಡೆಸಿದರು. ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆಗಳು, ಸ್ಕಾ$್ಯನಿಂಗ್ ದಾಖಲೆಗಳನ್ನು ಮರೆಮಾಚಲು ಅಥವಾ ನಾಶಪಡಿಸಲು ಏಜೆಂಟರು ಪ್ರಯತ್ನಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಎಫ್ಐಆರ್ ದಾಖಲಿಸಿ, ಸಂಬಂಧಿತ ಎಲ್ಲ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ$್ಯಗಳನ್ನು ವಶಪಡಿಸಿಕೊಂಡು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದರು.
ಆರೋಗ್ಯ ಇಲಾಖೆ ರಾಜ್ಯ ಸಕ್ಷಮ ಪ್ರಾಧಿಕಾರ ಪರವಾಗಿ ಡಾ.ಶೋಭಾ ಟಿ.ಆರ್. ಪಿಸಿಎನ್ಡಿಪಿಟಿ ವಿಭಾಗ ತಂಡದ ಕಾನೂನು ಸಮಾಲೋಚಕರಾದ ಅರುಣ್ ಮತ್ತು ಮೋನಿಶಾ, ಕಾರ್ಯಕ್ರಮ ವ್ಯವಸ್ಥಾಪಕ ಶಶಿ ತಂಡದೊಂದಿಗೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ, ಡಾ.ಆನಂದ್, ಆರೋಗ್ಯ ಶಿಕ್ಷಣ ಅಧಿಕಾರಿ ಪುಟ್ಟಸಿದ್ದಮ್ಮ, ಪಿಎಚ್ಸಿಒ ಫಾರ್ಮಸಿ ಆಧಿಕಾರಿ ಈಶ್ವರ್.ಎಚ್., ಮನೋ ಮತ್ತು ಮಂಜೇಗೌಡ ಜಿಲ್ಲಾ ವ್ಯವಸ್ಥಾಪಕರು. ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ.ಚೇತನ ಎಚ್ ಸಿ, ಚಿಂತಾಮಣಿ ತಾಲೂಕು ಅರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಇದ್ದರು.