ಕೊಲೂರು ಮಲ್ಲಪ್ಪ ಮೆಮೋರಿಯಲ್ ಕಾಲೇಜು ಮತ್ತು ಗಂಗೋತ್ರಿ ಕೋಚಿಂಗ್ ಸೆಂಟರ್ ಸಹಯೋಗದಡಿ ಯಾದಗಿರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರನ್ನು ಸನ್ಮಾನಿಸಲಾಯಿತು. ಆಶಪ್ಪ ಪೂಜಾರಿ, ಮಲ್ಲಿಕಾರ್ಜುನ ಮುಂಡರಗಿ, ಸಾಹಿತಿ ಎ.ಬಿ. ಪೂಜಾರಿ, ರವಿಕಾಂತ ಕಸವಿ, ಮಲ್ಲಿಕಾರ್ಜುನ ಅಲ್ಲಿಪುರ, ಶರಣು ಪೂಜಾರಿ ಇತರರಿದ್ದರು.
ಯಾದಗಿರಿ: ಬಡತನ ಎಂಬುದು ಸಾಧನೆಗೆ ಅಡ್ಡಿಯಾಗಬಾರದು. ಕಾರಣ ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಹೇಳಿದರು.
ಕೊಲೂರು ಮಲ್ಲಪ್ಪ ಮೆಮೋರಿಯಲ್ ಕಾಲೇಜು ಮತ್ತು ಗಂಗೋತ್ರಿ ಕೋಚಿಂಗ್ ಸೆಂಟರ್ ಸಹಯೋಗದಡಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿಯಲು ನಮ್ಮಲ್ಲಿರುವ ಬಡತನ ಮತ್ತು ಕೀಳುರಿಮೆಯೇ ಮುಖ್ಯ ಕಾರಣ ಎಂದರು.
ನಾವು ಬಡವರು ಅಥವಾ ನಮ್ಮಿಂದ ಸಾಧ್ಯವಿಲ್ಲ ಎಂಬ ಭಾವನೆಯನ್ನು ಮೊದಲು ಬಿಡಬೇಕು. ಶಿಕ್ಷಣದ ಮೂಲಕ ಮಾತ್ರ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಪ್ರಮುಖವಾಗಿ ಶಿಸ್ತು, ಸಮಯಪಾಲನೆ ಮತ್ತು ದೃಢ ನಿರ್ಧಾರವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೆಎಂಎಂ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಮುಂಡರಗಿ, ಸಾಹಿತಿ ಎ.ಬಿ. ಪೂಜಾರಿ, ಪ್ರಮುಖರಾದ ಆಶಪ್ಪ ಪೂಜಾರಿ, ರವಿಕಾಂತ ಕಸವಿ, ಮಲ್ಲಿಕಾರ್ಜುನ ಅಲ್ಲಿಪುರ, ಶರಣು ಪೂಜಾರಿ, ನಿಂಗಪ್ಪ ಬೆನಕನಹಳ್ಳಿ, ಭೀಮರಾಯ ಅನಪುರ ಇತರರಿದ್ದರು. ಸ್ಪರ್ಧಾತ್ಮಕ ಪರೀೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾನೇಗಾರ ಸಂವಾದ ನಡೆಸಿದರು.