Photo 
ರಾಜ್ಯ

ವಾಡಿ ಆರ್.ಓ.ಬಿ ಕೆಲಸ ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಡಾ. ಶರಣಪ್ರಕಾಶ ಪಾಟೀಲ ಸೂಚನೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಭೆ
ಕಲಬುರಗಿ: ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬರುವ ವಾಡಿ ಬಲರಾಮ್ ಚೌಕ್ ಬಳಿ ಹಲವಾರು ವರ್ಷಗಳಿಂದ ರೈಲ್ವೆ ರಸ್ತೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಲೆ ಇದೆ. ಇದು ಮಗಿಯೋದಾದರು ಯಾವಾಗ? ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇ.ಇ. ಇಬ್ರಾಹಿಂ ಅವರಿಗೆ ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೂಚಿಸಿದರು.
ಶನಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ (ದಿಶಾ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಕೆಲಸ ನಿಂತು ಹೋಗಿದೆ. ಇದನ್ನು ಪುನರಾರಂಭಿಸಿ ಇದು ಮುಗಿಯೋದಾದರು ಯಾವಾಗ? ಇಷ್ಟೊಂದು ತಡವಾದರೆ ಜನರಿಗೆ ನಾವೇನು ಉತ್ತರ ಕೊಡೋಣ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮೇಲೆ ಗರಂ ಆದ ಪ್ರಸಂಗ ನಡೆಯಿತು.
ಇದಲ್ಲದೆ ಚಿಂಚೋಳಿ ತಾಲೂಕಿನ ಮಿರಿಯಾಣ-ಕಲ್ಲೂರ-ಪೋಲಕಪಲ್ಲಿ-ಚಂದಾಪೂರ ರಸ್ತೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ವೆಚ್ಚ ಭರಿಸುವ ಕುರಿತು ಅಭಿಪ್ರಾಯ ನೀಡಲು ವಿಳಂಬದಿಂದ ಕೆಲಸ ಇನ್ನು ಆರಂಭವಾಗಿಲ್ಲ ಎಂದರಿತ ಸಚಿವರು, ಅಭಿಪ್ರಾಯ ನೀಡಲು ಇಷ್ಟೊಂದ ದಿನ ಬೇಕಾ ಎಂದು ಸಹಾಯಕ ಆಯುಕ್ತ ಪ್ರಭುರೆಡ್ಡಿ ಅವರನ್ನು ಪರಶ್ನಿಸಿದರು. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ವಿಳಂಬ ಧೋರಣೆ ತಾವು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೂರತ್-ಚೆನ್ನೈ 55 ಕಿ.ಮೀ. ರಸ್ತೆ ಪೂರ್ಣ:
ರಾಷ್ಟ್ರೀಯ ಹೆದ್ದಾರಿಗಳ ಕುರಿತು ಚರ್ಚೆಯಲ್ಲಿ ಎನ್.ಎಚ್.ಎ.ಐ. ಯೋಜನಾ ನಿರ್ದೇಶಕ ನವೀನ್ ಮಾತನಾಡಿ ಜಿಲ್ಲೆಯಲ್ಲಿ ಸೂರತ್-ಚೆನ್ನೈ ಎಕಾನಿಮಿಕ್ ಕಾರಿಡಾರ್ ಹೈವೆ ಮಹಾರಾಷ್ಟçದ ಗಡಿ ನಿಂಬಾಳದಿಂದ ಆರಂಭಗೊಂಡು ಯಾದಗಿರಿ ಜಿಲ್ಲೆಯ ಗಡಿ ಮಾರಡಗಿ ವರೆಗೆ ಜಿಲ್ಲೆಯಲ್ಲಿ ಸಮಾರು 71 ಕಿ.ಮಿ. ಹಾದು ಹೋಗುತ್ತಿದೆ. ಇದರಲ್ಲಿ ಇದೂವರೆಗೆ 51 ಕಿ.ಮಿ. ರಸ್ತೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾತನಾಡಿ ಹೈವೇ ಮದ್ಯದಲ್ಲಿ ಭೀಮಾ ಮತ್ತು ಅಮರ್ಜಾ ನದಿಗೆ ಅಡ್ಡಲಾಗಿಉ ಬ್ರಿಡ್ಡ್ ಕಾಮಗಾರಿಗಳನ್ನು ಪ್ರಸ್ತುತ ಬೇಸಿಗೆ ಸಂದರ್ಭದಲ್ಲಿ ಮುಗಿಸಿ ಕಾಲಮಿತಿಯಲ್ಲಿಯೇ ಇದನ್ನು ಪೂರ್ಣಗೊಳಿಸಿ ಎಂದರು.
ಕಲಬುರಗಿ ನಗರದಲ್ಲಿನ ಹುಮನಾಬಾದ ಬೇಸ್-ರಾಮ ಮಂದಿರ ಹೈವೇ ರಸ್ತೆಯ ಪಕ್ಕದಲ್ಲಿ ಸೇವಾ ರಸ್ತೆ ಅಲ್ಲಲಿ ಬಾಕಿ ಇದ್ದು, ಇದು ರಸ್ತೆ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ಕೂಡಲೆ ಸರ್ವಿಸ್ ರಸ್ತೆ ಕಾಮಗಾರಿ ಮೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಎನ್.ಎಚ್.ಎ.ಐ. ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ವಿಮಾನಯಾನ ಕಾಯಾಚರಣೆ ಆರಂಭಿಸಿ-ಖರ್ಗೆ:
ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನಗಳ ಕಾರ್ಯಚರಣೆ ಮಾಡಲು ಏರ್ ಇಂಡಿಯಾ ಸಂಸ್ಥೆ ಮುಂದೆ ಬಂದಿದ್ದು, ದೊಡ್ಡ ಗಾತ್ರದ ವಿಮಾನ ಸಂಚಾರ ಮಾಡಲು ಬಯಸಿದೆ. ಈ ನಿಟ್ಟಿನಲ್ಲಿ ಅನುಮತಿ ನೀಡುವಂತೆ ಡಿ.ಜಿ.ಸಿ.ಎ ಪತ್ರ ಬರೆಯಲಾಗಿದ್ದು, ಇನ್ನು ಅನುಮತಿ ದೊರೆತಿಲ್ಲ ಎಂದು ಕಲಬುರಗಿ ವಿಮಾನ ನಿಲ್ದಾಣ ಟರ್ಮಿನಲ್ ಮ್ಯಾನೇಜರ್ ದಿಲಶನ್ ಸಭೆಯ ಗಮನಕ್ಕೆ ತಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ವಿಮಾನಯಾನ ಕಾರ್ಯಚರಣೆ ಪುನರ್ ಆರಂಭಿಸವಙತೆ ಕಳೆದ ನವೆಂಬರ್ ಮಾಹೆಯಲ್ಲಿ ಸಂಸದರಾದ ರಾಧಾಕೃಷ್ಠ ದೊಡ್ಡಮನಿ ಮತ್ತು ಜಿ.ಕುಮಾರ ನಾಯಕ್ ಅವರು ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ ಕೂಡಲೆ ಪ್ರಾರಂಭಿಸಿವುದಾಗಿ ಕೇಂದ್ರ ಸಚಿವರು ಭರವಸೆ ನೀಡಿ ಏರ್ ಇಂಡಿಯಾ ಸಂಸ್ಥೆಗೆ ನಿರ್ದೇಶನ ಸಹ ನೀಡಿದ್ದಾರೆ.
ಈಗಾದಲೆ ಈ ಹಿಂದೆ ಏರ್ ಏಶಿಯಾ, ಏರ್ ಅಲೈನ್ಸ್ ಸಂಸ್ಥೆಯವರು ಪ್ರಯಾಣಿಕರ ಸಣ್ಣ ಗಾತ್ರದ ವಿಮಾನಗಳ ಕಾರ್ಯಚರಣೆ ಮಾಡಿದ್ದಾರೆ. ಏರ್ ಇಂಡಿಯಾ ಸಂಸ್ಥೆಗಳ ಅದೇ ಗಾತ್ರದ ವಿಮಾನಗಳ ಸಂಚಾರಕ್ಕೆ ಡಿ.ಜಿ.ಸಿ.ಎ. ಅನುಮತಿ ಬೇಕಿಲ್ಲ. ಕೂಡಲೆ ಕಾರ್ಯಚರಣೆ ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದರು.
ಡಿ.ಆರ್.ಎಂ. ಅವರಿಗೆ ನೋಟಿಸ್ ಕೊಡಿ:
ರೈಲ್ವೆ ಇಲಾಖೆ ಚರ್ಚೆ ವೇಳೆಯಲ್ಲಿ ಸಹಾಯಕ ಇಂಜಿನೀಯರ್ ಶಿವಕುಮಾರ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ, ಶಹಾಬಾದ, ವಾಡಿ, ಗಾಣಗಾಪೂರ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಪ್ರಯಾಣಿಕರಿಗೆ ಮೂಲಸೌಕರ್ಯ ಉತ್ತಮಗೊಳಿಸುವ ಕೆಲಸಗಳನ್ನು ತೆಗೆದುಕೊಳ್ಳಲಾಗಿದೆ. ಕಲಬುರಗಿ ರೈಲು ನಿಲ್ದಾಣದ ತಾರಫೈಲ್ ಪ್ರದೇಶದ ಕಡೆ ಹೊಸದಾಗಿ ಪಾರ್ಕಿಂಗ್ ಪ್ರದೇಶ, ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ನಿಲ್ದಾಣದಲ್ಲಿ ಮಾದರಿ ಶೌಚಾಲಯ, ಪ್ರಯಾಣಿಕರ ದಟ್ಟನೆ ಹೆಚ್ಚು ಹಿನ್ನೆಲೆಯಲ್ಲಿ ಎಸ್ಕಲೇಟರ್ ಒಳಗೊಂಡ 8 ರಿಂದ 12 ಮೀಟರ್‌ಕ್ಕೆ ಎಫ್.ಓ.ಬಿ ಹೆಚ್ಚಿಸುವ ಕಾರ್ಯ ಸಹ ಪ್ರಗತಿಯಲ್ಲಿದೆ ಎಂದು ವಿವರಿಸಿದರು. ಮಹತ್ವದ ದಿಶಾ ಸಭೆಗೆ ಒಂದ ವಾರ ಮುಂಚೆ ಲಿಖಿತ ಮಾಹಿತಿ ನೀಡಿದರು ಸಭೆಗೆ ಆಗಮಿಸಿದ ಸೋಲಾಪೂರ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸುವಂತೆ ಸಭೆಯ ಅಧ್ಯಕ್ಷರಾದಿಯಾಗಿ ಸದಸ್ಯರು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ನಿರ್ದೇಶನ ನೀಡಿದರು.