ಬಬಲೇಶ್ವರ ತಾಲೂಕಿನ ತಿಗಣಿಬಿದರಿಯಲ್ಲಿ ಹಳ್ಳಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ ಮತ್ತು ರಿಚಾರ್ಜ್ ಶಾಫ್ಟ್‌ಗಳ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಜಾಕಸಾಬ ದಳವಾಯಿ, ಶ್ರೀಶೈಲಗೌಡ ಪಾಟೀಲ, ವಿ.ಎಸ್. ಪಾಟೀಲ ಮತ್ತಿತರರಿದ್ದಾರೆ. 
ರಾಜ್ಯ

ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿಕೆ
  • ಭೂಮಿ ಪೂಜೆ
ವಿಜಯಪುರ: ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕಾಖಂಡಕಿ-ಮಮದಾಪುರ, ಬಬಲೇಶ್ವರ-ಯಕ್ಕುಂಡಿ, ಕಾಖಂಡಕಿ-ತೊನಶ್ಯಾಳ ಹಾಗೂ ತಿಗಣಿಬಿದರಿ ಹಳ್ಳಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ ಮತ್ತು ರಿಚಾರ್ಜ್ ಶಾಫ್ಟ್ೃಗಳ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಅಂದಾಜು 984 ಲಕ್ಷ ರೂ. ಮೌಲ್ಯದ ಕಾಮಗಾರಿಗೆ ಶುಕ್ರವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೀರು ಬಳಕೆದಾರರ ಸಂಘ ರಚಿಸುವ ಮೂಲಕ ನೀರು ಬಳಕೆಯಲ್ಲಿ ಶಿಸ್ತು ತರಲು ಕ್ರಮ ಕೈಗೊಳ್ಳಲಾಗುವುದು. ಅದರಿಂದ ಕಾಲುವೆ ಕೊನೆ ಭಾಗದವರೆಗೂ ನೀರು ತಲುಪಲು ಅನುಕೂಲವಾಗಲಿದೆ. ಅದರ ಜತೆಗೆ ಈಗ ಕೈಗೆತ್ತಿಕೊಳ್ಳಲಾಗಿರುವ ಹಳ್ಳಗಳನ್ನು ತುಂಬಿಸುವ ಯೋಜನೆಯಿಂದ ಅಂತರ್ಜಲ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೇ, ಕಾಲುವೆಗಳ ವ್ಯಾಪ್ತಿಯಲ್ಲಿ ಬರುವ 178 ಹಳ್ಳಗಳಿಗೆ ಎಸ್ಕೇಪ್ ಮೂಲಕ ನೀರು ಹರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಪ್ರತಿ ಕಿ.ಮೀ ಒಂದರಂತೆ ಚೆಕ್ ಡ್ಯಾಂ ನಿರ್ಮಾಣದಿಂದ ಸುಮಾರು 400 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಸಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ. ಹಳ್ಳಗಳ ಒತ್ತುವರಿ ತೆರವಿಗೆ ರೈತರು ಕೈ ಜೋಡಿಸಬೇಕು. ಸರಣಿಯಲ್ಲಿ ಬರುವ ಪ್ರತಿಯೊಂದು ಚೆಕ್ ಡ್ಯಾಂಗೆ ನೀರು ತಲುಪುವಂತಾಗಬೇಕು ಎಂದು ಹೇಳಿದರು.
ಹಳ್ಳಗಳನ್ನು ತುಂಬಿಸುವ ಯೋಜನೆ ಪೂರ್ಣಗೊಂಡ ನಂತರ ವಿಜಯಪುರ ದೇಶದಲ್ಲಿಯೇ ಅತಿ ಹೆಚ್ಚು ಅಂತರ್ಜಲ ಹೊಂದಿರುವ ಜಿಲ್ಲೆಯಾಗಲಿದೆ. ಅದರ ಜತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ರೈತರ ಆರ್ಥಿಕತೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಲಾಗುತ್ತಿದ್ದು, ಯುವಕರಿಗೆ ಹೈಟೆಕ್ ಜಿಮ್ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ ಮಾತನಾಡಿ, ಬರದ ನಾಡಿನ್ನು ಹಸಿರು ಬೀಡನ್ನಾಗಿ ಮಾಡಿರುವ ಸಚಿವ ಎಂ. ಬಿ. ಪಾಟೀಲರು ನಮ್ಮ ಪಾಲಿಗೆ ಅನ್ನದಾತರಾಗಿದ್ದಾರೆ ಎಂದರು.
ಮುಖಂಡ ಚನ್ನಪ್ಪ ಕೊಪ್ಪದ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಬಲೇಶ್ವರ ತಾಲೂಕು ಅಧ್ಯಕ್ಷ ಮಲ್ಲಪ್ಪ ದಳವಾಯಿ ಮಾತನಾಡಿದರು.
ಇಂಜಿನಿಯರ್ ವಿಶ್ವನಾಥ ಪೀರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ನಾಗರಾಜ ಕುಲಕರ್ಣಿ, ಪ್ರಭುಗೌಡ ಪಾಟೀಲ, ಬಾಬುಗೌಡ ಪಾಟೀಲ, ಅಶೋಕ ಕಾಖಂಡಕಿ, ಮುದಕನಗೌಡ ಪಾಟೀಲ, ಜಕ್ಕಪ್ಪ ಯಡವೆ, ರಫೀಕ ಸೋನಾರ, ಮಹೇಶ ಮಾಳಿ, ಪರಶು ಬಡಗಾರ, ರಜಾಕ ದಳವಾಯಿ, ಮತ್ತಿತರರಿದ್ದರು.