ಅನಧಿಕೃತ ತಿಂಡಿಬೀದಿ (ಫುಡ್‌ಕೋರ್ಟ್) ಕುರಿತು
ಬೆಂಗಳೂರು: ವಿಜಯನಗರದ 17 ಮತ್ತು 18ನೇ ಕ್ರಾಸ್‌ಗಳ ನಡುವೆ ಇರುವ ಚಿಕ್ಕಪೇಟೆ, ಬಿಸಿಎಸ್ ಲೇಔಟ್‌ನ ನೀರಿನ ಟ್ಯಾಂಕ್ ಹಿಂಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ತಿಂಡಿಬೀದಿ (ಫುಡ್‌ಕೋರ್ಟ್) ಕುರಿತು ದೂರುದಾರ ನಾಗಭೂಷಣ್ ಎಂಬುವರು, ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ.
ರಾಜ್ಯ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಫುಡ್‌ಕೋರ್ಟ್ ನಡೆಸಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ (ಫುಟ್‌ಪಾತ್) ಫುಡ್‌ಕೋರ್ಟ್ ನಡೆಸುವವರು ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟು ಮಾಡಬಾರದು. ಮಾರಾಟಕ್ಕೆ ಅನುಮತಿ ನೀಡಿದರೂ ಅದು ಫುಟ್‌ಪಾತ್ ಅಥವಾ ರಸ್ತೆಯ ಒಂದೇ ಬದಿಯಲ್ಲಿ ಇರಬೇಕು. ರಸ್ತೆಯ ಎರಡು ಬದಿಗಳಲ್ಲಿ ಇರುವಂತಿಲ್ಲ. ಯಾವುದೇ ಸ್ಟಾಲ್ಗಳನ್ನು ನಿರ್ಮಿಸಬಾರದು ಎಂದು ತನ್ನ ತೀರ್ಪುನಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ ಎಂದು ಲೋಕಾಯುಕ್ತಕ್ಕೆ ಕೊಟ್ಟಿರುವ ದೂರಿನಲ್ಲಿ ದೂರುದಾರರು ಉಲ್ಲೇಖ ಮಾಡಿದ್ದಾರೆ.
ಗೃಹ ಬಳಕೆಗೆ ಮೀಸಲಿಟ್ಟಿರುವ ಎಲ್ಪಿಜಿ ಸಿಲಿಂಡರ್‌ಗಳನ್ನು ಸ್ಟ್ರೀರ್ಟ್ ವೆಂಡರ್ಸ್‌ಗಳು, ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಸುರಕ್ಷತಾ ನಿಯಮ ಉಲ್ಲಂಘಿಸಿ ರಸ್ತೆ ಬದಿಯಲ್ಲಿ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಸಿಲಿಂಡರ್ ಉಪಯೋಗಿಸಲಾಗುತ್ತಿದೆ. ಈ ವೇಳೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡರೆ ಹೆಚ್ಚಿನ ಅನಾಹುತವಾಗಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆಯಿಂದ ಪರವಾನಗಿ ಪಡೆಯದೆ ಹಲವರು ಹೋಟೆಲ್ ಉದ್ದಿಮೆ ನಡೆಸುತ್ತಿದ್ದಾರೆ ಎಂದು ಫುಡ್‌ಕೋರ್ಟ್‌ನ ಕರಾಳದಂಧೆಯ ಬಗ್ಗೆ ದೂರುದಾರರು ವಿವರಿಸಿದ್ದಾರೆ.
ವಿಜಯನಗರದಲ್ಲಿ ಕೇವಲ 17 ಜನರಿಗೆ ಪರವಾನಗಿ ನೀಡಿದ್ದರೂ 50ಕ್ಕೂ ಅಧಿಕ ಮಾರಾಟಗಾರರು ವ್ಯಾಪಾರ ನಡೆಸುತ್ತಿದ್ದಾರೆ. 17 ಜನರ ಪರವಾನಗಿ ಅವಧಿ ಈಗಾಗಲೇ ಮುಗಿದಿದೆ. 17 ಜನರ ಪೈಕಿ 7 ಮಂದಿ ವಿಜಯನಗರ ಮತ್ತು ಗೋವಿಂದರಾಜನಗರದ ನಿವಾಸಿಗಳು. ಉಳಿದವರು ಸುಳ್ಳು ದಾಖಲೆಯನ್ನು ಕೊಟ್ಟು ಪರವಾನಗಿ ಪಡೆದಿದ್ದಾರೆ. ಅಲ್ಲದೆ, ಈ ಸ್ಥಳಗಳಲ್ಲಿ ಮದ್ಯ, ಗಾಂಜಾ ಸೇರಿ ಇತರ ಬಗೆಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರದಾರರು ಹೇಳಿದ್ದಾರೆ.