ಕೇಂದ್ರ ಸರ್ಕಾರಕ್ಕೆ ಇಂದು ಎಥೆನಾಲ್ ದೂರು! ಕ್ರಮ ಕೈಗೊಳ್ಳದಿದ್ರೆ ರಾಜ್ಯ ವ್ಯಾಪ್ತಿಯಲ್ಲಿ ಹೊಸ ಕಾನೂನು ಜಾರಿ  
ರಾಜ್ಯ

ಕೇಂದ್ರ ಸರ್ಕಾರಕ್ಕೆ ಇಂದು ಎಥೆನಾಲ್ ದೂರು! ಕ್ರಮ ಕೈಗೊಳ್ಳದಿದ್ರೆ ರಾಜ್ಯ ವ್ಯಾಪ್ತಿಯಲ್ಲಿ ಹೊಸ ಕಾನೂನು ಜಾರಿ

ಬೆಂಗಳೂರು: ರಾಜ್ಯದ ಪೆಟ್ರೋಲಿಯಂ ಟರ್ವಿುನಲ್​​ಗಳಲ್ಲಿ ಪೆಟ್ರೋಲ್​ಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿರುವ ಕುರಿತು ರಾಜ್ಯವು ಕೇಂದ್ರ ಸರ್ಕಾರಕ್ಕೆ ಬುಧವಾರ ವರದಿ ಸಲ್ಲಿಸುತ್ತಿದೆ. ಈ ಕುರಿತಾದ ತಾಂತ್ರಿಕ ವರದಿ ಹಾಗೂ ಪ್ರಯೋಗಾಲಯದ ಪರೀಕ್ಷಾ ವರದಿಗಳೆಲ್ಲವನ್ನೂ ಕ್ರೋಡೀಕರಿಸಿ ಸಲ್ಲಿಸಲಾಗುತ್ತಿದೆ. ಈ ಸಂಗತಿಯನ್ನು ಆಹಾರ ಸಚಿವ ರಿಜ್ವಾನ್ ಅರ್ಷದ್ ಖಚಿತಪಡಿಸಿದ್ದಾರೆ.

ರಾಜ್ಯ ಸರ್ಕಾರ ನೀಡುವ ಈ ವರದಿ ಆಧರಿಸಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಕ್ರಮಕ್ಕೆ ಮುಂದಾಗದಿದ್ದರೆ, ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲೇ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಂಕ್​ಗಳಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ದಾಖಲೆಗಳು ಲಭ್ಯವಾಗಿತ್ತು. ರಾಜ್ಯದ 60ಕ್ಕೂ ಅಧಿಕ ಪೆಟ್ರೋಲ್ ಬಂಕ್ಗಳಲ್ಲಿ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ ನಿಗದಿತ ಶೇ.20 ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವುದನ್ನು ಖಾತ್ರಿಪಡಿಸಿಕೊಳ್ಳಲಾಗಿತ್ತು.

ಈ ವಿಚಾರವನ್ನು ಎಐಸಿಸಿ ಕೂಡ ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರದುದ್ದಕ್ಕೂ ಅಭಿಯಾನ ಆರಂಭಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಇದೇ ವೇಳೆ ಭಾರತ ಸರ್ಕಾರಿ ಸ್ವಾಮ್ಯದ ಎಲ್ಲ ಪೆಟ್ರೋಲಿಯಂ ಸಂಸ್ಥೆಗಳು ಏಕಕಾಲದಲ್ಲಿ ರಾಜ್ಯದ ಉದ್ದಗಲಕ್ಕೂ ವಿವಿಧ ಊರುಗಳಲ್ಲಿ ಸ್ಯಾಂಪಲ್ ಸಂಗ್ರಹಿಸಿ ಎಲ್ಲೂ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇಲ್ಲದಿರುವುದನ್ನು ಫ್ಯಾಕ್ಟ್ ಚೆಕ್ ರೂಪದಲ್ಲಿ ನಡೆಸಿದ್ದವು. ಆದರೆ, ಈ ಬೆಳವಣಿಗೆಯಲ್ಲಿ ಅರ್ಧ ಹಾದಿ ಕ್ರಮಿಸಿದ್ದ ಸರ್ಕಾರ ಮುಂದಿನ ಹಂತವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಬಯಸಿದೆ.

ಈ ಸಂದರ್ಭದಲ್ಲಿಯೇ ಪೆಟ್ರೋಲ್ ಬಂಕ್ಗಳ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆ, ಅನುಮಾನ ವ್ಯಕ್ತವಾಗಿತ್ತು. ಆದರೆ, ಇದಕ್ಕೆಲ್ಲ ಬಂಕ್ ಮಾಲೀಕರು ಕಾರಣರಲ್ಲ. ಬಂಕ್​ಗಳಲ್ಲಿ ಎಥೆನಾಲ್ ಮಿಶ್ರಣ ಸಾಧ್ಯವಿಲ್ಲ. ಇದು ಪೆಟ್ರೋಲ್ ಬಂಕ್ಗಳಿಗೆ ಸರಬರಾಜಾಗುವ ಪೆಟ್ರೋಲಿಯಂ ಟರ್ವಿುನಲ್​ಗಳ ಹಂತದಲ್ಲೇ ಆಗುತ್ತಿರುವ ಲೋಪವಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.