High court 
ರಾಜ್ಯ

ಪರಿಹಾರದ ಮೊತ್ತ 250 ರೂ. ನಿಂದ 2.78 ಲಕ್ಷಕ್ಕೆ ಏರಿಕೆ! High court

ಪ್ರಮುಖ ಮುಖ್ಯಾಂಶಗಳು

  • ಪ್ರತಿ ಸೆಂಟ್​ನ ಮಾರುಕಟ್ಟೆ ಮೌಲ್ಯ ನಿಗದಿಪಡಿಸಿದ ಹೈಕೋರ್ಟ್
  • ಮಂಗಳೂರು ಏರ್​ಪೋರ್ಟ್​ನ ಭೂಸ್ವಾಧಿನ ಪ್ರಕರಣ
  • ಮೂರು ದಶಕಗಳ ನಂತರ ಭೂಮಾಲೀಕನಿಗೆ ನ್ಯಾಯ

ಬೆಂಗಳೂರು: 

ಭೂಸ್ವಾಧಿನ ಪರಿಹಾರ ನೀಡುವುದರಲ್ಲಿ ಸರ್ಕಾರದ ವಿಳಂಬ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್​, ಮಂಗಳೂರು ವಿಮಾನ ನಿಲ್ದಾಣದ ರನ್​ವೇ ಟರ್ಮಿನಲ್​ ಟವರ್​ ನಿಮಾರ್ಣಕ್ಕಾಗಿ 1990ರಲ್ಲಿ ವಶಪಡಿಸಿಕೊಂಡಿದ್ದ ಜಮೀನಿಗೆ ಸಂಬಂಧಿಸಿದಂತೆ, ಸಂತ್ರಸ್ತ ಭೂಮಾಲೀಕರೊಬ್ಬರಿಗೆ ನೀಡಬೇಕಾದ ಪರಿಹಾರದ ಮೌಲ್ಯವನ್ನು ಪ್ರತಿ ಸೆಂಟ್​ಗೆ 250 ರೂ. ನಿಂದ 2.78 ಲಕ್ಷ ರೂ. ಗೆ ಏರಿಸಿದ ಆದೇಶಿಸಿದೆ. ಆ ಮೂಲಕ ಮೂರು ದಶಕಗಳ ನಂತರ ಸಂತ್ರಸ್ತ ಭೂಮಾಲೀಕನಿಗೆ ನ್ಯಾಯ ಒದಗಿಸಿದೆ. 

ಮಂಗಳೂರಿನ ಮಳವೂರು ಗ್ರಾಮದ ಆರ್ಥರ್​ ಪಿರೇರಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್​ ಮತ್ತು ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಖಾಸಗಿ ವ್ಯಕ್ತಿಗಳ ಜಮೀನನ್ನು ಸ್ವಾಧಿನಪಡಿಸಿಕೊಂಡು, ಸೂಕ್ತ ಪರಿಹಾರ ನೀಡದೆ ದಶಕಗಳ ಕಾಲ ವಿಳಂಬ ಮಾಡುವುದು ಸಂವಿಧಾನಬದ್ಧ ಮತ್ತು ಮಾನವ ಹಕ್ಕುಗಳ ತೀವ್ರ ಉಲ್ಲಂನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಮಂಗಳೂರು ವಿಮಾನ ನಿಲ್ದಾಣದ ಎರಡನೇ ರನ್​ವೇ ರ್ಟಮಿನಲ್​ ಟವರ್​ ನಿಮಾರ್ಣಕ್ಕಾಗಿ ಆರ್ಥರ್​ ಪಿರೇರಾ ಅವರ 1 ಎಕರೆ ಜಮೀನನ್ನು (100 ಸೆಂಟ್​) ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರವು 1990ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 1992ರಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿಗಳು ಈ ಜಮೀನಿಗೆ ಪ್ರತಿ ಸೆಂಟ್​ಗೆ 250 ರೂ. ಮಾರುಕಟ್ಟೆ ಮೌಲ್ಯ ಪರಿಹಾರ ದರ ನಿಗದಿಪಡಿಸಿದ್ದರು.
ಇದನ್ನು ವಿರೋಧಿಸಿ ಭೂಮಾಲೀಕರು 1993ರಲ್ಲೇ ನ್ಯಾಯಾಲಯಕ್ಕೆ ಪ್ರಕರಣ ಕಳುಹಿಸಲು ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಬರೋಬ್ಬರಿ 22 ವರ್ಷಗಳ ಕಾಲ ವಿಳಂಬ ಮಾಡಿದ್ದರು. ಕೊನೆಗೆ ಅರ್ಜಿದಾರರು 2014ರಲ್ಲಿ ಹೈಕೋರ್ಟ್​ ಮೆಟ್ಟಿಲೇರಿದ ಮೇಲಷ್ಟೇ ಅಧಿಕಾರಿಗಳು ಅರ್ಜಿಯನ್ನು ಸಿವಿಲ್​ ನ್ಯಾಯಾಲಯಕ್ಕೆ ರವಾನಿಸಿದ್ದರು. ನಂತರ ಮ್ಯಾಜಿಸ್ಟ್ರೆಟ್​ ಕೋರ್ಟ್​ ಜಮೀನಿನ ಬೆಲೆಯನ್ನು ಪ್ರತಿ ಸೆಂಟ್​ಗೆ 7 ಸಾವಿರಕ್ಕೆ ಹೆಚ್ಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

2014ರ ಮೌಲ್ಯ ಆಧರಿಸಿ ಲೆಕ್ಕ

ಭೂಸ್ವಾಧಿನ ಮಾಡಿಕೊಂಡು ರನ್​ವೇ ನಿರ್ಮಿಸಿದ್ದರೂ, ಸರ್ಕಾರವು 2015ರವರೆಗೂ ಪರಿಹಾರದ ಹಣವನ್ನು ಕೋರ್ಟ್​ನಲ್ಲಿ ಠೇವಣಿ ಮಾಡಿರಲಿಲ್ಲ. 2015ರಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ನಂತರ 1.41 ಲಕ್ಷ ರೂ. ಮತ್ತು 2025ರ ಸೆಪ್ಟೆಂಬರ್​ನಲ್ಲಿ 68.10 ಲಕ್ಷ ರೂ ಹಣವನ್ನು ಠೇವಣಿ ಇಟ್ಟಿತ್ತು. ಸಾಮಾನ್ಯವಾಗಿ 1990ರ ಅಧಿಸೂಚನೆ ಆಧಾರದ ಮೇಲೆ ಜಮೀನಿನ ಮೌಲ್ಯ ಲೆಕ್ಕ ಹಾಕಬೇಕಿತ್ತು. ಆದರೆ, ಸರ್ಕಾರದ ತೀವ್ರ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್​, ತನ್ನ ವಿಶೇಷಾಧಿಕಾರ ಬಳಸಿ ಮಾರುಕಟ್ಟೆ ಮೌಲ್ಯವನ್ನು 2014ಕ್ಕೆ ಅನ್ವಯಿಸಿ ಲೆಕ್ಕ ಹಾಕಿದೆ. ಅದೇ ಪ್ರದೇಶದಲ್ಲಿ ಇತರರು 2010ರಲ್ಲಿ ಮಾಡಿದ್ದ ಜಮೀನಿನ ಮಾರಾಟ ದಾಖಲೆಯನ್ನು ಆಧರಿಸಿ, ವಾರ್ಷಿಕ ಶೇ. 15ರಷ್ಟು ಏರಿಕೆಯೊಂದಿಗೆ ಪ್ರತಿ ಸೆಂಟ್​ಗೆ 2.78 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. 

ℹ️

ಹಿಂದಿನ ಬೆಲೆ ನೀಡುವುದು ಹಾಸ್ಯಾಸ್ಪದ 

1990ರ ದಶಕದ ಮಾರುಕಟ್ಟೆ ದರದಲ್ಲಿ ಇಷ್ಟೊಂದು ವರ್ಷಗಳ ನಂತರ ಪರಿಹಾರ ನೀಡುವುದನ್ನು ಒಪ್ಪಿದರೆ, ಅದು ಸಂವಿಧಾನ ನೀಡಿರುವ ಆಸ್ತಿಯ ಹಕ್ಕನ್ನು ಹಾಸ್ಯಸ್ಪದಗೊಳಿಸಿದಂತಾಗುತ್ತದೆ. ಹಣದ ಮೌಲ್ಯವು ಕಾಲಕ್ರಮೇಣ ಕುಸಿಯುತ್ತದೆ. 1990 ಅಥವಾ 2003ರಲ್ಲಿ ಆ ಹಣದಿಂದ ಖರೀದಿಸಬಹುದಾದ ವಸ್ತುವನ್ನು 2025&26ರಲ್ಲಿ ಖರೀದಿಸಲು ಸಾಧ್ಯವಿಲ್ಲ. ಜಮೀನನ್ನೇ ನಂಬಿ ಬದಕುವ ರೈತರು ಅಥವಾ ಸಣ್ಣ ಭೂಮಾಲೀಕರು ತಮ್ಮ ಆಸ್ತಿ ಕಳೆದುಕಂಡಾಗ ತಕ್ಷಣಕ್ಕೆ ಪರಿಹಾರ ಸಿಗದಿದ್ದರೆ ಅವರು ಬೀದಿಗೆ ಬೀಳುತ್ತಾರೆ. ಆದ್ದರಿಂದ ಶ್ರೀಘ್ರ ಪರಿಹಾರ ಪಾವತಿಸುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಪೀಠ ಎಚ್ಚರಿಸಿದೆ.