ಸುಲೇಪೇಟದಿಂದ ದಸ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಗ್ಗು&ಗುಂಡಿಗಳು ಬಿದ್ದಿರುವುದು.
- ಸಂಪೂರ್ಣ ಹದಗೆಟ್ಟ ಸುಲೇಪೇಟ- ದಸ್ತಾಪುರ ರಸ್ತೆ
- ಆಡಳಿತದ ವಿರುದ್ಧ ಜನಾಕ್ರೋಶ
ಚಿಂಚೋಳಿ: ಹಜ್ಜೆ-ಹೆಜ್ಜೆಗೂ ಕಾಣುವ ತಗ್ಗು-ಗುಂಡಿ.. ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುವ ಸವಾರರು.. ನಿತ್ಯವೂ ಯಾರಾದರೊಬ್ಬರೂ ಬೈಕ್ನಿಂದ ಬಿದ್ದು ಗಾಯ ಮಾಡಿಕೊಳ್ಳುವುದು ಸಾಮಾನ್ಯ.. ಇದು ಸುಲೇಪೇಟದಿಂದ ದಸ್ತಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯಾಗಿದೆ.
ಸುಮಾರು 4 ಕಿಮೀ. ರಸ್ತೆ ಇದಾಗಿದ್ದು, ಕಲಬುರಗಿ ಹಾಗೂ ಚಿಂಚೋಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೋಡ್ ಇದಾಗಿದೆ. ನಿತ್ಯವೂ ಸಾಕಷ್ಟು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಕಳೆದ 2 ವರ್ಷಗಳ ಹಿಂದೆಯೇ ರಸ್ತೆ ನಿರ್ಮಿಸಿದ್ದು, ಅದಾಗಲೇ ಹಾಳಾಗಿವೆ. ಬೃಹತ್ ತಗ್ಗುಗಳು ಬಿದ್ದಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ.
ಬೇಸಿಗೆಯಲ್ಲಿ ಧೂಳು ಆವರಿಸಿದರೆ ಮಳೆಗಾಲದಲ್ಲಿ ಕೆಸರುಮಯವಾಗಲಿದೆ. ಇದೀಗ ಕೆಸರು ಹಾಗೂ ನೀರು ತುಂಬಿಕೊಂಡು ರಸ್ತೆ ಯಾವುದು ? ಗುಂಡಿ ಯಾವುದು ಎಂಬುದು ತಿಳಿಯದಂತಾಗಿದೆ. ದ್ವಿಚಕ್ರ ವಾಹನ ಸವಾರರಂತೂ ತಗ್ಗುಗಳನ್ನು ತಪ್ಪಿಸಲು ಹೋಗಿ ಕೈ-ಕಾಲು ಮುರಿದುಕೊಳ್ಳುತ್ತಿದ್ದಾರೆ. ರಸ್ತೆಯೋ ಅಥವಾ ಗುಂಡಿಗಳ ಸಾಮ್ರಾಜ್ಯವೋ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸುಗಮ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ವಾಹನ ಸವಾರರು ಹಾಗೂ ಹಳ್ಳಿಗಳ ನಿವಾಸಿಗಳ ಒತ್ತಾಯವಾಗಿದೆ.
ಚುನಾವಣೆ ವೇಳೆ ಸುಗಮ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಇದೀಗ ಕಣ್ಮರೆ ಆಗಿದ್ದಾರೆ. ಸಾಕಷ್ಟು ಬಾರಿ ರಸ್ತೆ ದುರಸ್ತಿಗೆ ಮನವಿ ಮಾಡಿದರೂ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಈ ಭಾಗದ ಸಾರ್ವಜನಿಕರ ಗೋಳು ಕೇಳುವವರಿಲ್ಲದಂತಾಗದೆ.
— > ಯಲ್ಲಾಲಿಂಗ ದಂಡಿನ್, ಪ್ರಯಾಣಿಕ, ಚಿಮ್ಮಇದಲಾಯಿ
ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ತಾತ್ಕಾಲಿಕವಾಗಿ ತಗ್ಗು-ಗುಂಡಿಗಳನ್ನು ಮುಚ್ಚುವಂತೆ ಈಗಾಗಲೇ ಸೂಚನೆ ನೀಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಮಳೆಗಾಲದ ನಂತರ ಡಾಂಬರ್ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತೇವೆ.
— > ಗಿರಿರಾಜ ಸಜ್ಜನ್, ಜೆಇ, ಲೋಕೋಪಯೋಗಿ ಚಿಂಚೋಳಿ