Commuting daily through potholes
ನಗರದ ಹೃದಯಭಾಗದ ಸೊಸೈಟಿ ವೃತ್ತದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗಿನ ಪ್ರಮುಖ ರಸ್ತೆ ಗುಂಡಿಮಯವಾಗಿ ಮಾರ್ಪಟ್ಟಿದ್ದು, ವಾಹನ ಸವಾರರು, ಪ್ರಯಾಣಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದ್ದು, ನಗರದ ಪ್ರಮುಖ ರಸ್ತೆ ಹದಗೆಟ್ಟಿದ್ದರೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
2025ರ ಆಗಸ್ಟ್ಗೆ ರಸ್ತೆ ಗುಂಡಿ ಮುಚ್ಚುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಸ್ತುತ ಹೊಸ ಟೆಂಡರ್ ಕರೆಯಲಾಗುತ್ತಿದೆ. ಆನಂತರ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಅದಕ್ಕೂ ಮೊದಲು ತಾತ್ಕಾಲಿಕವಾಗಿ ಕಳ್ಳ ಮುಚ್ಚುವ ಕಾರ್ಯ ಕೈಗೊಳ್ಳಲಾಗುವುದು.
— ಮೂಡಲಗಿರಿ ಎಇಇ ಪಿಡಬ್ಲ್ಯುಡಿ ಇಲಾಖೆ ಮುಳಬಾಗಿಲು
ಸುಮಾರು 500ಮೀ ಉದ್ದದ ಈ ರಸ್ತೆಯ ಹಲವೆಡೆ ಡಾಂಬರು ಕಿತ್ತುಹೋಗಿ ಗುಂಡಿಗಳು ನಿಮಾರ್ಣವಾಗಿದ್ದು, ರಸ್ತೆ ಜಲ್ಲಿ ಕಲ್ಲುಗಳಿಂದ ತುಂಬಿದೆ. ಮಳೆ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಅಡ್ಡಾದಿಡ್ಡಿ ಸಂಚರಿಸಬೇಕಾಗಿದ್ದು, ಅಪಘಾತಗಳಾಗುವ ಆತಂಕ ಎದುರಾಗಿದೆ.
ಮಳೆ ಬಂದರೆ ಮತ್ತಷ್ಟು ಅವಾಂತರ: ಮಳೆ ಸುರಿದಾಗ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕೆಸರುಮಯವಾಗುತ್ತಿದ್ದು, ವಾಹನಗಳ ಚಕ್ರಗಳಿಂದ ನೀರು ಚಿಮ್ಮುವುದರಿಂದ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ. ಬಸ್, ಆಟೊ ಸೇರಿದಂತೆ ನಿತ್ಯ ಸಂಚರಿಸುವ ವಾಹನಗಳಿಗೂ ರಸ್ತೆ ದುಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದೆ.
ಹಳ್ಳ ಬಿದ್ದು ರಸ್ತೆ ಹಾಳಾಗಿದ್ದರು ಟೆಂಡರ್ ಪ್ರಕ್ರಿಯೆ ಮತ್ತಿತರ ಕಾರ್ಯ ಚಟುವಟಿಕೆ ಮಾಡಲು ಸರ್ಕಾರ ಮತ್ತು ಇಲಾಖೆ ತಡ ಮಾಡಬಾರದು. ಸರ್ಕಾರ ಅಪಘಾತವಾಗಿ ತೊಂದರೆಗೆ ಒಳಗಾದವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಜತೆಗೆ ತಕ್ಷಣ ರಸ್ತೆ ಸರಿಪಡಿಸಬೇಕು.
— ಕೆ.ಅಮರೇಶ್ ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ
ಪ್ರಮುಖ ಸ್ಥಳಗಳಿಗೆ ಇದೇ ದಾರಿ: ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯ, ತಾಲೂಕು ಆಡಳಿತದ ವಿವಿಧ ಕಚೇರಿಗಳು, ಶಾಸಕರ ಕಚೇರಿಗೆ ತೆರಳಲು ಇದೇ ಪ್ರಮುಖ ರಸ್ತೆಯಾಗಿದ್ದು, ದಿನವಿಡೀ ವಾಹನ ಹಾಗೂ ಜನಸಂಚಾರ ಹೆಚ್ಚಿರುತ್ತದೆ. ಇಂತಹ ಪ್ರಮುಖ ರಸ್ತೆಯೇ ರ್ನಿಲಕ್ಷ$್ಯಕ್ಕೆ ಒಳಗಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಶ್ವತ ಪರಿಹಾರಕ್ಕೆ ಆಗ್ರಹ: ಪಿಡಬ್ಲ್ಯೂಡಿ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕೇವಲ ಗುಂಡಿ ಮುಚ್ಚುವ ತಾತ್ಕಾಲಿಕ ಕ್ರಮಕ್ಕೆ ಸೀಮಿತವಾಗದೆ, ಸಂಪೂರ್ಣವಾಗಿ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜನಪ್ರತಿನಿಧಿಗಳು ಕೂಡ ತುರ್ತು ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.