Commuters struggle due to the lack of a bus stop at Dibburahalli Circle. 
ರಾಜ್ಯ

ದಿಬ್ಬೂರಹಳ್ಳಿ ವೃತ್ತದಲ್ಲಿ ಬಸ್​ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

ಸಾದಲಿ:

ಚಿಂತಾಮಣಿ ಮತ್ತು ಬಾಗೇಪಲ್ಲಿ ರಸ್ತೆಗಳು ಸಂಧಿಸುವ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ವೃತ್ತದಲ್ಲಿ ಬಸ್​ ನಿಲ್ದಾಣ, ಸೌಕರ್ಯಗಳಿಲ್ಲದೆ ಪ್ರಯಾಣಿಕರು ರಸ್ತೆಯಲ್ಲೇ ಪರದಾಡುವಂತಾಗಿದೆ.

ವೃತ್ತದ ಸುತ್ತಲಿನ ಪಾದಚಾರಿ ಮಾರ್ಗ ಹಾಗೂ ಚರಂಡಿಗಳನ್ನು ಅಂಗಡಿ ಮಾಲೀಕರು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಚರಂಡಿಗಳು ಮುಚ್ಚಿಹೋಗಿದ್ದು, ಮಳೆ ಬಂದಾಗ ಕೆರೆಗೆ ಹರಿಯಬೇಕಿದ್ದ ನೀರು ರಸ್ತೆ ಮೇಲೆ ಹರಿದು ಸಮೀಪದ ತೋಟಗಳಿಗೆ ನುಗ್ಗುತ್ತದೆ. ವೃತ್ತವೇ ಕೆಸರುಗದ್ದೆಯಂತಾಗಿ, ಮಳೆ, ಬಿಸಿಲಿನಲ್ಲಿ ಬಸ್​ಗಾಗಿ ಕಾಯುವ ಪ್ರಯಾಣಿಕರ ಪಾಡು ಹೇಳತೀರದು.

ಶಾಸಕರ ಸೂಚನೆಗೂ ಬೆಲೆ ಇಲ್ಲ

ಶಾಸಕ ಬಿ.ಎನ್​.ರವಿಕುಮಾರ್​ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಗಮನಿಸಿ ರಸ್ತೆ ವಿಸ್ತರಣೆ ಹಾಗೂ ನಿಲ್ದಾಣ ನಿಮಾರ್ಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಈವರೆಗೆ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ಈ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ರಾತ್ರಿ ಬೀದಿದೀಪ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ವೇಗವಾಗಿ ಬರುವ ವಾಹನಗಳಿಂದ ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಣ ಭಯದಲ್ಲೇ ಜನ ಸಂಚರಿಸಬೇಕಾದ ಸ್ಥಿತಿ ಇದೆ. ವೃತ್ತದ ನಡುವೆ ಇರುವ ಹೈ ಮಾಸ್ಟ್​ ದೀಪದ ಬುಡದಲ್ಲಿನ ಸಿಮೆಂಟ್​ ದಿಂಡು ಮುರಿದುಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಪಾದಚಾರಿ ಮಾರ್ಗ ಒತ್ತುವರಿ ತೆರವು ವಿಚಾರವಾಗಿ ಗ್ರಾಮ ಪಂಚಾಯಿತಿಯವರನ್ನು ಪ್ರಶ್ನಿಸಿದರೆ "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು' ಎಂಬ ಉತ್ತರ ನೀಡುತ್ತಾರೆ. ಅದೇ ರಸ್ತೆ ಬದಿಯಲ್ಲಿ ಗ್ರಾಪಂ ಕಟ್ಟಡ, ಗ್ರಂಥಾಲಯವಿದ್ದು, ಗ್ರಂಥಾಲಯಕ್ಕೆ ತೆರಳಲೂ ಆಗದಷ್ಟು ಒತ್ತುವರಿಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಈ ವೃತ್ತದಲ್ಲಿ ಬಸ್​ ನಿಲ್ದಾಣಕ್ಕಾಗಿ ಹತ್ತಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ. ಮಳೆ ಬಂದರೆ ನಿಲ್ಲಲು ಸೂರಿಲ್ಲ, ಬಿಸಿಲಿದ್ದರೆ ನೆರಳಿಲ್ಲ. ಜನರು ಪ್ರತಿನಿತ್ಯ ಸಂಕಷ್ಟ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ನಿಲ್ದಾಣ ನಿರ್ಮಿಸಬೇಕು.

— ಶ್ರೀನಿವಾಸ್​ ದಿಬ್ಬೂರಹಳ್ಳಿ

"ಲೋಕೋಪಯೋಗಿ ಇಲಾಖೆಗೆ 3&4 ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ. ಚರಂಡಿ ಅಭಿವೃದ್ಧಿಗೆ ಅನುದಾನ ಇದ್ದರೂ, ಅದರ ಮೇಲಿನ ಅಂಗಡಿಗಳನ್ನು ತೆರವುಗೊಳಿಸದೆ ಕಾಮಗಾರಿ ಆರಂಭಿಸಲಾಗದು ಎನ್ನುವುದು ಪಂಚಾಯಿತಿ ವಾದ. ಪೊಲೀಸ್​ ಇಲಾಖೆ ಒತ್ತುವರಿ ತೆರವುಗೊಳಿಸುವಂತೆ ಪಂಚಾಯಿತಿಗೆ ಪತ್ರ ಬರೆದಿದೆ.
ಪಿಡಬ್ಲ್ಯುಡಿ ಅಧಿಕಾರಿಗಳನ್ನು ಕೇಳಿದರೆ ಫುಟ್​ಪಾತ್​ ಮೇಲೆ ಅಂಗಡಿ ಇಟ್ಟಿರುವವರಿಗೆ ನೋಟಿಸ್​ ನೀಡಿ ಒಂದು ವಾರದ ಗಡುವು ಕೊಡಲಾಗಿದೆ ಎನ್ನುತ್ತಾರೆ. ಆದರೆ ನೋಟಿಸ್​ ನೀಡಿ ಒಂದೂವರೆ ವರ್ಷ ಕಳೆದರೂ ಒತ್ತುವರಿ ತೆರವು ಆಗಿಲ್ಲ.
ಜಿಲ್ಲಾಡಳಿತ ಮತ್ತು ಸ್ಥಳಿಯ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿಸಬೇಕು, ಪ್ರಯಾಣಿಕರಿಗೆ ಬಸ್​ ನಿಲ್ದಾಣ ಹಾಗೂ ದೀಪದ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.