ಗುಳೇದಗುಡ್ಡದ ಪವಾರ್ ಕ್ರಾಸ್‌ನಲ್ಲಿ ಟ್ರಾಫಿಕ್ ಜಾಮ್ ಆಗಿರುವುದು.
- ಕಟ್ಟುನಿಟ್ಟಿನ ತುರ್ತು ಕ್ರಮಕ್ಕೆ ಸಾರ್ವಜನಿಕರ ಆಗ್ರಹ
- ಆಂಬುಲೆನ್ಸ್‌ಗೂ ದಾರಿ ಸಿಗದ ಪರಿಸ್ಥಿತಿ
ಗುಳೇದಗುಡ್ಡ: ಪಟ್ಟಣದ ಹದಯ ಭಾಗದಲ್ಲಿರುವ ಪವಾರ್ ಕ್ರಾಸ್‌ನಲ್ಲಿ ಕಿರಿದಾದ ರಸ್ತೆ ಹಾಗೂ ಅಸಂಘಟಿತ ಪಾರ್ಕಿಂಗ್‌ನಿಂದಾಗಿ ಪ್ರತಿದಿನ ಸಂಚಾರ ಸಿಕ್ಕು ಉಂಟಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಗುಳೇದಗುಡ್ಡ-ಬಾಗಲಕೋಟೆ ಮತ್ತು ಇಲಕಲ್ಲ-ಬಾದಾಮಿ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಈ ವತ್ತದಲ್ಲಿ ರಸ್ತೆ ಅಗಲವು ಅಂದಾಜು 20 ಅಡಿಗೆ ಸೀಮಿತವಾಗಿದೆ. ಇದರಿಂದ ಬಸ್, ಲಾರಿ ಸೇರಿ ಭಾರಿ ವಾಹನಗಳು ಮುಖಾಮುಖಿಯಾಗಿ ಸಿಲುಕಿಕೊಳ್ಳುವ ಪರಿಸ್ಥಿತಿ ಸಾಮಾನ್ಯವಾಗಿದೆ. ರಸ್ತೆ ತಿರುವು ಸ್ಪಷ್ಟವಾಗಿ ಕಾಣದ ಕಾರಣ ಅಪಘಾತದ ಭೀತಿ ಕೂಡ ಹೆಚ್ಚಾಗಿದೆ.
ಪವಾರ್ ಕ್ರಾಸ್‌ನಲ್ಲಿ ಸುಗಮ ಸಂಚಾರಕ್ಕಾಗಿ ಪಾರ್ಕಿಂಗ್ ನಿಯಂತ್ರಣ ಹಾಗೂ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾಹನ ಸವಾರರಿಗೆ ಸಂಕಷ್ಟ: ಬುಧವಾರ ಸಂಜೆ ಸಂಭವಿಸಿದ ಟ್ರಾಫಿಕ್ ಜಾಮ್ ವೇಳೆ ಬಸ್ ಮತ್ತು ಲಾರಿಗಳ ನಡುವೆ ದ್ವಿಚಕ್ರ ವಾಹನ ಸವಾರರು ಸಿಲುಕಿಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದ ಘಟನೆ ಸಮಸ್ಯೆಯ ಗಂಭೀರತೆಯನ್ನು ತೋರಿಸಿದೆ. ಮಹಿಳೆಯರು, ವದ್ಧರು ರಸ್ತೆ ಬದಿಯಲ್ಲಿ ನಿಂತು ದಾರಿ ತೆರೆಯುವುದನ್ನು ಕಾಯಬೇಕಾದ ಪರಿಸ್ಥಿತಿ ಎದುರಾಯಿತು.
ಪಾರ್ಕಿಂಗ್ ಅವ್ಯವಸ್ಥೆ: ರಸ್ತೆ ಬದಿಯ ಅಂಗಡಿಗಳ ಮುಂದೆ ಬೈಕ್ ಮತ್ತು ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಶಾಲಾ ಸಮಯ ಹಾಗೂ ಸಂಜೆ ವೇಳೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಆಂಬುಲೆನ್ಸ್‌ಗೂ ದಾರಿ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.
"
ಪಟ್ಟಣದಲ್ಲಿ ದಿನನಿತ್ಯ ಲಾರಿ ಮತ್ತು ಬಸ್‌ಗಳು ರಸ್ತೆ ತಿರುವಿನಲ್ಲಿ ಮುಂದೆ ಸಾಗಲು ಸಾಧ್ಯವಾಗದೆ ವಾಹನಗಳ ಚಾಲಕರಿಗೆ ತೊಂದರೆ ಆಗುತ್ತಿದೆ. ಜೊತೆ ಯಲ್ಲಿ ಪಾದಚಾರಿಗಳು ಹೆಚ್ಚು ತೊಂದರೆ ಅನುಭವಿಸುತ್ತಿ ದ್ದಾರೆ. ಹಲವಾರು ಬಾರಿ ಅಪಘಾತ ಆಗಿರುವ ಉದಾಹರಣೆ ಇದೆ. ವಾಹನಗಳ ದಟ್ಟಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ರಸ್ತೆಯಲ್ಲಿ ಮಾರ್ಗದ ಸೂಚನಾ ನಾಮಲಕ ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
ವಿಠ್ಠಲಸಾ ಬದ್ದಿ ಸ್ಥಳೀಯ ನಿವಾಸಿ.
"
ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಿರುವು ಸೂಚಿಸುವ ಲಕಗಳು, ರಸ್ತೆ ಬದಿ ಕನ್ನಡಿ ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಜೊತೆಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಸಿಬ್ಬಂದಿ ನಿಯೋಜನೆ ಅಗತ್ಯವಾಗಿದೆ. ಜೊತೆಗೆ, ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಗುಳೇದಗುಡ್ಡ ಪೊಲೀಸ್ ಠಾಣೆ ಅಧಿಕಾರಿ.