- ಸರ್ಕಾರದ ಆಶಯಕ್ಕೆ ಆಲೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೆಲವು ವೈದ್ಯರು ಹಾಗೂ ನರ್ಸ್‌ಗಳು ಮುಳುವು
- ವೈದ್ಯಕೀಯ ಸೌಲಭ್ಯಗಳಿದ್ದರೂ ರೋಗಿಗಳನ್ನು ಖಾಸಗಿ ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ
ಆಲೂರು: ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕೆಂಬ ಸರ್ಕಾರದ ಆಶಯಕ್ಕೆ ಆಲೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೆಲವು ವೈದ್ಯರು ಹಾಗೂ ನರ್ಸ್‌ಗಳು ಮುಳುವುವಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿದ್ದರೂ ರೋಗಿಗಳನ್ನು ಖಾಸಗಿ ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಳುಹಿಸುವ ಮೂಲಕ ಬಡವರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ದೂರಿವೆ.
ದೂರದ ಹಳ್ಳಿಗಳಿಂದ ಆಸ್ಪತ್ರೆಗೆ ಆಗಮಿಸುವ ರೋಗಿಗಳು, ವೈದ್ಯರು ಬರೆದುಕೊಟ್ಟ ಚೀಟಿ ಹಿಡಿದು ಸಾವಿರಾರು ರೂ.ವೆಚ್ಚ ಮಾಡಿ ಖಾಸಗಿ ಲ್ಯಾಬ್‌ಗಳಲ್ಲಿ ರಕ್ತ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸರ್ಕಾರ ಬಡವರಿಗಾಗಿ ನೀಡುತ್ತಿರುವ ಉಚಿತ ವೈದ್ಯಕೀಯ ಸೌಲಭ್ಯ ದೊರಕದಂತಾಗಿದೆ.
ಖಾಸಗಿ ಸೆಂಟರ್‌ಗಳ ಜತೆ ಶಾಮೀಲು: ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ, ಸಿ.ಟಿ. ಸ್ಕಾೃನ್, ಎಕ್ಸ್‌ರೇ ಹಾಗೂ ಸುಧಾರಿತ ರಕ್ತ ಪರೀಕ್ಷೆಯಂತಹ ಅತ್ಯಾಧುನಿಕ ಸೌಲಭ್ಯ ಉಚಿತವಾಗಿ ಲಭ್ಯವಿವೆ. ಇಷ್ಟೆಲ್ಲ ಸೌಲಭ್ಯವಿರುವ ಆಸ್ಪತ್ರೆಗೆ ಚೀಟಿ ಬರೆದುಕೊಡುವ ಬದಲು, ನಿರ್ದಿಷ್ಟ ಖಾಸಗಿ ಲ್ಯಾಬ್‌ಗಳಿಗೆ ತೆರಳುವಂತೆ ಚೀಟಿ ಬರೆದುಕೊಡಲಾಗುತ್ತಿದೆ ಎನ್ನಲಾಗಿದೆ.ಕಮಿಷನ್ ಪಡೆಯುವ ದುರಾಸೆಗೆ ಇಂತಹ ಕೆಲಸ ಮಾಡಲಾಗುತ್ತಿದೆ ಎಂಬುದು ರೋಗಿಗಳ ಮಾತು.
ಸಂಕಷ್ಟದಲ್ಲಿ ಬಡ ಹಾಗೂ ಮಧ್ಯಮ ವರ್ಗ: ಕೂಲಿ ಮಾಡಿ ಜೀವನ ಸಾಗಿಸುವ ತಾಲೂಕಿನ ಜನತೆಗೆ ಖಾಸಗಿ ಲ್ಯಾಬ್‌ಗಳ ದುಬಾರಿ ವೆಚ್ಚ ಭರಿಸುವುದು ಶಕ್ತಿಗೂ ಮೀರಿದ್ದಾಗಿದೆ. ಉಚಿತ ಚಿಕಿತ್ಸೆಯ ಭರವಸೆಯಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು, ಸಾವಿರಾರು ರೂಪಾಯಿ ಸಾಲ ಮಾಡಿ ಸ್ಕ್ಯಾನಿಂಗ್ ಹಾಗೂ ರಕ್ತ ಪರೀಕ್ಷೆ ಮಾಡಿಸುವಂತಾಗಿದೆ. ಇದು ಬಡವರ ಆರೋಗ್ಯದ ಹಕ್ಕನ್ನು ನೇರವಾಗಿ ಕಸಿದುಕೊಂಡಂತಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳೇ ಇತ್ತ ಗಮನ ಹರಿಸಿ: ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು (ಡಿಎಚ್‌ಒ) ತಕ್ಷಣ ತಾಲೂಕು ಆಸ್ಪತ್ರೆಯತ್ತ ಗಮನ ಹರಿಸಿ ಖಾಸಗಿ ಲ್ಯಾಬ್‌ಗಳಿಗೆ ಚೀಟಿ ಬರೆಯುವ ವೈದ್ಯರು ಮತ್ತು ನರ್ಸ್‌ಗಳ ವಿರುದ್ಧ ಕಟ್ಟುನಿಟ್ಟಿನ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. ಆಸ್ಪತ್ರೆಯ ಮುಂಭಾಗದಲ್ಲೇ ಉಚಿತ ವೈದ್ಯಕೀಯ ಸೇವೆಗಳ ವಿವರ ಹಾಗೂ ದೂರು ಪೆಟ್ಟಿಗೆಯನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸೇವಾ ಮನೋಭಾವ ಇಲ್ಲದೆ ಹಣ ಮಾಡುವುದನ್ನೇ ವೃತ್ತಿ ಮಾಡಿಕೊಂಡಿರುವ ಕೆಲವು ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರಾಗಿ ಬರುವ ಬದಲು ಖಾಸಗಿ ಆಸ್ಪತ್ರೆಯಲ್ಲೇ ಕಾರ್ಯನಿರ್ವಹಿಸಲಿ. ಬಡ ರೋಗಿಗಳ ಜೀವದ ಜತೆ ಚೆಲ್ಲಾಟವಾಡಬಾರದು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲ. ಹಾಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಶಿಾರಸು ಮಾಡಬೇಕು. ನಮ್ಮಲ್ಲಿ ಲಭ್ಯವಿರುವ ರಕ್ತ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಮಾಡುತ್ತೇವೆ. ಖಾಸಗಿ ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕೆಲವು ವೈದ್ಯರು ಚೀಟಿ ಬರೆಯುತ್ತಿದ್ದಾರೆ ಎಂಬ ಆರೋಪ ಸಂಬಂಧ ಪರಿಶೀಲನೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು.
ಡಾ. ನವೀನ್ ಆಡಳಿತ ವೈದ್ಯಾಧಿಕಾರಿ, ಆಲೂರು ಸಾರ್ವಜನಿಕ ಆಸ್ಪತ್ರೆ
ತಾಲೂಕು ಅಸ್ಪತ್ರೆಯಲ್ಲಿ ಮೂಲ ಸೌಕರ್ಯಎಂಬುದು ಮರೀಚಿಕೆಯಾಗಿವೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳಿಲ್ಲ. ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಗೆ ಅವಕಾಶವಿದ್ದರೂ ವೈದ್ಯರು ರೋಗಿಗಳನ್ನು ಖಾಸಗಿ ಮೆಡಿಕಲ್, ಖಾಸಗಿ ಆಸ್ಪತ್ರೆಗೆಗಳಿಗೆ ಕಳುಹಿಸಿಕೊಡುತ್ತಾರೆ. ಕೂಡಲೇ ಶಾಸಕರು ಇತ್ತ ಗಮನಹರಿಸಿ ಸಮಸ್ಯೆ ಬಹೆಹರಿಸಬೇಕಿದೆ.
ನಟರಾಜ್ ನಾಗಲಗೂಡು ತಾಲೂಕು ಪಂಚಾಯಿತಿ ಮಾಜಿ ಸದಸ್ಯ
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ನೂನ್ಯತೆಗಳು ಇದ್ದು, ಎಲ್ಲವನ್ನೂ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆಸ್ಪತ್ರೆಗೆ ಬೇಕಾಗಿರುವ ಅಗತ್ಯ ಸೌಲಭ್ಯಒದಗಿಸುವುದರ ಜತೆಗೆ ಸಿಬ್ಬಂದಿಯನ್ನು ನೇಮಕಗೊಳಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.