ವಿಜಯಪುರ ಹೊರ ವಲಯದ ತೊರವಿ ತಾಂಡಾ ನಂ.1ರಲ್ಲಿ ಸೇವಾಲಾಲ್ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು. ಚಂದ್ರು ಚೌಧರಿ, ಮೋಹನ ಮಹಾರಾಜ್, ತುಳಸಿಂಗ್ ನಾಯಕ ಮತ್ತಿತರರಿದ್ದಾರೆ.
- ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
- ಬಂಜಾರ ತಾಂಡಾಗಳ ಅಭಿವೃದ್ಧಿ
ವಿಜಯಪುರ : ಬೇರೆ ಬೇರೆ ಧರ್ಮಕ್ಕೆ ಮತಾಂತರಗೊಂಡಿರುವ ಬಂಜಾರ ಸಮಾಜ ಬಾಂಧವರನ್ನು ಮರಳಿ ಸನಾತನ ಧರ್ಮಕ್ಕೆ ಕರೆ ತಂದು, ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಕೆಲಸ ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ತೊರವಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅಧಿಕಾರಾವಧಿಯಲ್ಲಿದ್ದಾಗ ಅದನ್ನು ಸದುಪಯೋಗ ಪಡೆದುಕೊಂಡು ಜನರಿಗಾಗಿ, ಧರ್ಮಕ್ಕಾಗಿ ಕೆಲಸ ಮಾಡಬೇಕು. ಹಲವರು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಗಳಾಗಿದ್ದಾರೆ. ಆದರೆ, ಜನರು ಅವರಲ್ಲಿ ಕೆಲವರನ್ನು ಮಾತ್ರ ನೆನೆಯುತ್ತಾರೆ. ಕಾರಣ ಒಳ್ಳೆಯದನ್ನು ಮಾಡಿದವರನ್ನು ಜನ ಸ್ಮರಿಸುತ್ತಾರೆ ಎಂದರಲ್ಲದೇ, ನಾನು ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಅಂತಲೇ ಇಡೀ ಬಂಜಾರಾ ಸಮಾಜ ಪ್ರತಿ ಚುನಾವಣೆಯಲ್ಲಿ ಒಗ್ಗಟ್ಟಾಗಿ ಮತ ನೀಡುತ್ತಾರೆ. ಅವರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ನಗರದಂತೆಯೇ ತಾಂಡಾಗಳಲ್ಲಿಯೂ ಮಾಡಿರುವೆ ಎಂದು ತಿಳಿಸಿದರು.
ಮುಖಂಡರಾದ ಮೋಹನ ಮಹಾರಾಜ್, ತುಳಸಿಂಗ್ ನಾಯಕ, ಗೋಪಾಲ ಮಹಾರಾಜ್, ಚಂದು ಮಹಾರಾಜ್, ಗಣಪತಿ ಪವಾರ, ಸೋಮು ಪೂಜಾರಿ, ತಹಸೀಲ್ದಾರ್ ಸುರೇಶ ಜಮಾದಾರ, ಪಿಡಿಒ ರಾಜೇಶ್ವರಿ ತುಂಗಳ, ದೇವರಾಜ ರಾಠೋಡ, ನೇಮು ರಾಠೋಡ, ಭಗವಂತ ರಾಠೋಡ, ಮಾನಸಿಂಗ ರಾಠೋಡ, ಶಿವಾಜಿ ಜಾಧವ, ಉಮೇಶ ರಾಠೋಡ, ಪ್ರಕಾಶ ಚವಾಣ್, ಶಂಕರ ಹೂಗಾರ, ಚಂದ್ರು ಚೌದರಿ ಮತ್ತಿತರರಿದ್ದರು.
ಕಾಮಗಾರಿಗಳಿಗೆ ಭೂಮಿ ಪೂಜೆ, ಉದ್ಘಾಟನೆ
ತೊರವಿ ತಾಂಡಾ ನಂ.1ರಲ್ಲಿ 2018-19ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಮಂಜೂರಾದ 40 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್, 2024-25ನೇ ಸಾಲಿನ ಜಿ.ಪಂ ವತಿಯಿಂದ ಮಂಜೂರಾದ 9 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, 2025-26ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಿಸಿದ 50 ಲಕ್ಷ ರೂ. ಅನುದಾನದಲ್ಲಿ ಅಥಣಿ ಮುಖ್ಯ ರಸ್ತೆಯಿಂದ ನಂದುಲಾಲ್ ದೇವಸ್ಥಾನವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಿಸಿದ ಒಟ್ಟು 28 ಲಕ್ಷ ರೂ. ಅನುದಾನದಲ್ಲಿ ಸೇವಾಲಾಲ್ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು.