ರಾಜ್ಯ ಹೈಕೋರ್ಟ್​ 
ರಾಜ್ಯ

ವಾಣಿಜ್ಯ ಸಿಲಿಂಡರ್​ ಹಂಚಿಕೆಯಲ್ಲಿ ತಾರತಮ್ಯ; ಹೋಟೆಲ್​ ಸಂಘ ಸಲ್ಲಿಸಿದ್ದ ರಿಟ್​ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ ಸಿಲಿಂಡರ್​ ಹಂಚಿಕೆಯಲ್ಲಿ ತಾರತಮ್ಯ ಎಂಬ ಆರೋಪ
  • ಹೋಟೆಲ್​ಗಳ ಸಂಘದಿಂದ ನ್ಯಾಯಾಲಯಕ್ಕೆ ರಿಟ್​ ಅರ್ಜಿ ಸಲ್ಲಿಕೆ
  • ವಾದ-ಪ್ರತಿವಾದ ಆಲಿಸಿ, ಅರ್ಜಿ ವಜಾಗೊಳಿಸಿದ ಹೈಕೋರ್ಟ್​
ಬೆಂಗಳೂರು: ಇಸ್ರೇಲ್​-ಇರಾನ್​ ಯುದ್ಧದಿಂದ ಎಲ್​ಪಿಜಿ ಸಿಲಿಂಡರ್​ಗಳ ಕೊರತೆ ಉದ್ಭವಿಸಿದ್ದು, ಹೋಟೆಲ್​ ಉದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವವರಿಗೆ ವಾಣಿಜ್ಯ ಸಿಲಿಂಡರ್​ಗಳ ಪೂರೈಕೆಯಲ್ಲಿ ಕೊರತೆ ಹಾಗೂ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಹೋಟೆಲ್​ಗಳ ಸಂಘ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಇದೀಗ ಹೈಕೋರ್ಟ್​ ವಜಾಗೊಳಿಸಿದೆ.
ವಿದೇಶಗಳಿಗೆ ಹೋಲಿಸಿದರೆ ಸರ್ಕಾರ ಉತ್ತಮವಾಗಿ ಸಮಸ್ಯೆ ನಿರ್ವಹಿಸುತ್ತಿದೆ. ಯುದ್ಧದಂತ ಸಂದರ್ಭದಲ್ಲಿ ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಅರ್ಜಿದಾರರು ತಮ್ಮ ಸಮಸ್ಯೆಗಳನ್ನು ಸರ್ಕಾರದೊಂದಿಗಿನ ಸಭೆಯಲ್ಲಿ ಪ್ರಸ್ತಾಪಿಸಬಹುದು ಎಂದು ತಿಳಿಸಿತು.

ರಾಜ್ಯ ಸರ್ಕಾರ ಪರ ವಕೀಲರು

ಈ ವಿಚಾರವನ್ನು ಸರ್ಕಾರದ ನಿರ್ವಹಣೆಗೆ ಬಿಡುವುದು ಉತ್ತಮ ಎಂದ ಕೇಂದ್ರ ಸರ್ಕಾರದ ಪರ ವಕೀಲರ ವಾದವನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿತು. ರಾಜ್ಯ ಸರ್ಕಾರವು ಸಮಸ್ಯೆ ನಿರ್ವಹಣೆಗೆ ಕಾರ್ಯನಿರತವಾಗಿದೆ. ಈ ಬಗ್ಗೆ ಇಂದು ಕೂಡ ಸಭೆ ನಡೆಯಲಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 

ಕೇಂದ್ರ ಸರ್ಕಾರದ ಪರ ವಕೀಲರ ವಾದ

ಹಾಲಿ ವಿಚಾರವನ್ನು ಸರ್ಕಾರಕ್ಕೆ ಬಿಡುವುದು ಒಳಿತು. ಪರಿಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದನ್ನು ನೋಡಿಕೊಂಡು ಸರ್ಕಾರ ನಿರ್ವಹಿಸುತ್ತಿದೆ. ಆದ್ಯತೆಯಲ್ಲಿ ಸಿಲಿಂಡರ್ ಪೂರೈಸಲಾಗುತ್ತಿದೆ. ಕೆಲವೊಂದು ವಿಚಾರಗಳು ನಮ್ಮ ಕೈಯಲ್ಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾಗಿದೆ. ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದೇ ರೀತಿಯ ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡಲು ಬಾಂಬೆ ಹೈಕೋರ್ಟ್ ಕೂಡ ನಿರಾಕರಿಸಿದೆ ಎಂದು ತಿಳಿಸಿದರು.