Come together to see the glory of Hindu history. 
ರಾಜ್ಯ

ಹಿಂದೂ ಗತವೈಭವ ಕಾಣಲು ಒಗ್ಗೂಡಿ

ಗುಬ್ಬಿ: ಆಧ್ಯಾತ್ಮಿಕ ಶಕ್ತಿಯ ಮೇಲೆ ಭವ್ಯವಾಗಿ ಬೆಳೆದ ಹಿಂದೂ ದೇಶ ಮತ್ತೊಮ್ಮೆ ಗತವೈಭವ ಕಾಣಲು ನಮ್ಮ ಆಧ್ಯಾತ್ಮಿಕ ಶಕ್ತಿ ಜತೆ ಆತ್ಮವಿಶ್ವಾಸದ ಮನಸ್ಸುಗಳು ಒಗ್ಗೂಡಿ ಪ್ರತಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಹಬ್ಬವನ್ನು ಆಚರಿಸಿ ನಮ್ಮ ಸಂಸತಿ ಉಳಿಸಿ ಬೆಳೆಸಬೇಕು ಎಂದು ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ದಾಸೋಹ ನಿಲಯದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಧು ಸಂತರು, ದೈವಭಕ್ತರು, ಧರ್ಮ ಅನುಯಾಯಿಗಳು ಕಟ್ಟಿ ಬೆಳೆಸಿದ ಹಿಂದೂ ಧರ್ಮ ಎಲ್ಲ ಧಮೀರ್ಯರ ಜತೆ ಸಹಿಷ್ಣುತೆ ತೋರುತ್ತಾ ಬೆಳೆದಿದೆ. ಸಮಾಜ ಉಳಿಸಿ ಬೆಳೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಂದಾಗಿದೆ. ಪಕ್ಷಾತಿತ ಕಾರ್ಯಕ್ರಮದಲ್ಲಿ ಎಲ್ಲ ಹಿಂದೂ ಧರ್ಮ ಅನುಯಾಯಿಗಳು ಪಾಲ್ಗೊಂಡು ಸಮಾಜೋತ್ಸವ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ, ಶತಮಾನೋತ್ಸವ ಆಚರಿಸಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಸಮಾಜ ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹಿಂದೂ ಸಮಾಜೋತ್ಸವ ಈ ತಿಂಗಳ 18ರಿಂದ ಆಯೋಜಿಸುತ್ತಿದೆ. ತಾಲೂಕಿನ ಎಲ್ಲ ಶ್ರೀ ಮಠಗಳು, ಧಾರ್ಮಿಕ ಕ್ಷೇತ್ರಗಳು, ಆಸ್ತಿಕ ವೃಂದ ಹಾಗೂ ಹಿಂದೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಅಧ್ಯಕ್ಷ, ಕೈಗಾರಿಕೋದ್ಯಮಿ ಬೆಣಚಿಗೆರೆ ರುದ್ರೇಶ್​ ಮಾತನಾಡಿ, ತಾಲೂಕಿನಲ್ಲಿ ಹಿಂದೂ ಸಮಾಜೋತ್ಸವ ನಡೆಸುವ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷಾತಿತ ಕಾರ್ಯಕ್ರಮವಾಗಿ ಎಲ್ಲ ಪಕ್ಷೀಯ ಹಿಂದೂ ಧಮೀರ್ಯರನ್ನು ಒಗ್ಗೂಡಿಸಿ ಸಮಾಜೋತ್ಸವ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲು ಇದೇ ತಿಂಗಳು 18 ರಿಂದ ಚಾಲನೆ ನೀಡಲಾಗುತ್ತಿದೆ ಎಂದರು.