ಚೇತೋಹಾರಿ ಅನುಭವಗಳ ಬುತ್ತಿ ಕಟ್ಟಿಕೊಟ್ಟಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂತಿಮ ಹಂತಕ್ಕೆ ತಲುಪಿದ್ದು, ರಮ್ಯವಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬದ ನವೋಲ್ಲಾಸದಲ್ಲಿ ಮಿಂದೆದ್ದಿರುವ ಸಾಂಸ್ಕೃತಿಕ ನಗರಿ ಈ ಘಳಿಗೆಗಾಗಿ ಉತ್ಸಾಹದಿಂದ ಕಾಯುತ್ತಿದ್ದು, ಈ ವಿಜಯದಶಮಿ ಮೆರವಣಿಗೆಗಾಗಿ ಅರಮನೆ ನಗರಿ ಮೈಸೂರು ಸಕಲ ರೀತಿಯಲ್ಲಿ ಸಿದ್ಧವಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ, ಕವಿಗೋಷ್ಠಿ, ಕ್ರೀಡೆ, ಫಲಪುಷ್ಪ ಪ್ರದರ್ಶನ, ಏರ್ ಶೋ, ಕಂಬಳ, ಡ್ರೋನ್ ಶೋ ಮುಂತಾದ ದಸರಾ ಸುಗ್ಗಿ ಸವಿಯನ್ನು ಆಸ್ವಾದಿಸಿರುವ ಲಕ್ಷಾಂತರ ಜನರು ಅಂಬಾರಿ ಉತ್ಸವ ಕಣ್ತುಂಬಿಕೊಳ್ಳುವ ತವಕದಲ್ಲಿದ್ದಾರೆ. ಲಕ್ಷಾಂತರ ದೀಪಗಳ ಪ್ರಭೆಯಲ್ಲಿ ಕಂಗೊಳಿಸುತ್ತಿರುವ ಸ್ವಚ್ಛನಗರಿ ಮೈಸೂರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಅ. 21ರಂದು ಬುಧವಾರ ಮಧ್ಯಾಹ್ನ 1.36ರಿಂದ 1.56ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಪೂಜೆ ನೆರವೇರಲಿದೆ. ಬಳಿಕ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಗಜಪಡೆಯ ನಾಯಕ ‘ಪ್ರಶಾಂತ’ ಆನೆ ಹೊರುವ ಅಂಬಾರಿಯಲ್ಲಿ ಪ್ರತಿಷ್ಠಾಪಿತ ನಾಡದೇವಿ ಚಾಮುಂಡಿದೇವಿಗೆ ಸಂಜೆ 4.10ರಿಂದ 4.35ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪನಮನ ಸಲ್ಲಿಸುವರು.
ಇದುವೇ ಅಂಬಾರಿ ಆನೆ ಪ್ರಶಾಂತನಿಗೆ ಮತ್ತು ಸಿಎಂಗೂ ಮೊದಲ ಅನುಭವದ ಹಿರಿಮೆ. ತಿಂಗಳುಗಟ್ಟಲೇ ತಾಲೀಮು ನಡೆಸಿ ಸಜ್ಜಾಗಿರುವ 12 ಸಾಲಂಕೃತ ಆನೆಗಳು, ಕರುನಾಡಿನ ಪರಂಪರೆ ಅನಾವರಣಗೊಳಿಸುವ ಸ್ತಬ್ಧಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು ಅರಮನೆಯಿಂದ ಅಂದಾಜು 5 ಕಿ.ಮೀ. ದೂರದ ಬನ್ನಿಮಂಟಪದವರೆಗೆ ದಿಬ್ಬಣದೊಂದಿಗೆ ಹೆಜ್ಜೆ ಹಾಕಿ ಕಣ್ಮನ ಸೆಳೆಯಲಿವೆ.
ಮೈಸೂರು ಅರಮನೆಯಲ್ಲೂ ಕೊನೇ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ವೇದಿಕೆ ನಿರ್ವಿುಸಿ, ಆರೂವರೆ ಅಡಿ ಎತ್ತರದವರೆಗೆ ಅಟ್ಟಣೆಯ ವ್ಯವಸ್ಥೆ ಮಾಡಲಾಗುತ್ತಿದೆ. ಅತಿಗಣ್ಯರು, ಗಣ್ಯರು, ಸಾಮಾನ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಲ ಕುರ್ಚಿಗಳ ಸಂಖ್ಯೆಯನ್ನು 46 ಸಾವಿರಕ್ಕೆ ಹೆಚ್ಚಿಸಲಾಗಿದೆ. ಗೋಲ್ಡ್ ಕಾರ್ಡ್ ಆಸನಗಳಿಗೆ ಸಂಖ್ಯೆ ನಮೂದು ಮಾಡಿ ಗೊಂದಲ ತಪ್ಪಿಸಲು ಪ್ರಯತ್ನಿಸಲಾಗಿದೆ. ಅಲ್ಲದೆ, ಜಂಬೂ ಸವಾರಿ ಸಾಗುವ ರಾಜಬೀದಿಗೆ ಜನರು ನುಗ್ಗದಂತೆ ತಡೆಯಲು ಎರಡು ಬದಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ.
ವಿಜಯದಶಮಿ ಮೆರವಣಿಗೆ ಮುನ್ನ ಚಾಮುಂಡಿಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತದೆ. ದೇವಿಗೆ ಅಲಂಕಾರ ಮಾಡಿ ಮಂಗಳಾರತಿ ಮಾಡಲಾಗುತ್ತದೆ. ಅರಮನೆ ಖಜಾನೆಯಲ್ಲಿರುವ ಅಂಬಾರಿಯನ್ನು ಹೊರ ತೆಗೆದು, ಸ್ವಚ್ಛಗೊಳಿಸಿ, ಅದಕ್ಕೂ ಅಲಂಕಾರ ಮಾಡಿ ಸಿಂಗರಿಸಿ ಪೂಜೆ ನೆರವೇರಿಸಲಾಗುತ್ತದೆ. ಅಂಬಾರಿಯಲ್ಲಿ ನಾಡದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅರಮನೆ ಆವರಣದಲ್ಲಿರುವ ರಾಜವಂಶಸ್ಥರ ನಿವಾಸದ ಬಳಿ ಕ್ರೇನ್ ಮೂಲಕ ಗಜಪಡೆಯ ನಾಯಕ ಪ್ರಶಾಂತ ಆನೆಗೆ ಅಂಬಾರಿ ಹೊರಿಸಲಾಗುತ್ತದೆ. ಮಂಗಳವಾರ ರಾತ್ರಿ ಪ್ರಶಾಂತ ಆನೆಯ ಮಾವುತ, ಕಾವಾಡಿ ಚಾಮುಂಡಿಬೆಟ್ಟಕ್ಕೆ ಹೋಗಿ ದೇವಿಗೆ ಪೂಜೆ ಸಲ್ಲಿಸಿ ನಿಂಬೆಹಣ್ಣು ಸ್ವೀಕರಿಸುತ್ತಾರೆ. ಅದನ್ನೇ ಆನೆಗಳ ಕಾಲಿನಡಿ ಇಟ್ಟು ಮುನ್ನಡೆಸಲಾಗುತ್ತದೆ. ಬಳಿಕ ಸಿಎಂ ಡಿ.ಕೆ.ಶಿವಕá-ಮಾರ್ ದೇವಿಗೆ ಪುಷ್ಪನಮನ ಸಲ್ಲಿಸುವರು. ಬನ್ನಿಮಂಟಪ ತಲುಪಿದ ಬಳಿಕ ಅಂಬಾರಿಯನ್ನು ವಿಸರ್ಜನೆ ಮಾಡಿ ಲಾರಿ ಮೂಲಕ ಅದನ್ನು ಅರಮನೆಗೆ ತಂದು ಖಜಾನೆಯಲ್ಲಿ ವಾಪಸ್ ಇರಿಸಲಾಗುತ್ತದೆ ಎಂದು ಅರ್ಚಕ ಪ್ರಹ್ಲಾದ ಜೋಶಿ ತಿಳಿಸಿದರು.
ಕಲೆ ವೈವಿಧ್ಯ ಪರಿಚಯಿಸುವ, ಸರ್ಕಾರದ ಜನಪರ ಯೋಜನೆ ಬಿಂಬಿಸುವ 35 ಸ್ತಬ್ಧಚಿತ್ರಗಳು ಈ ಸಲ ಮೆರವಣಿಗೆಯಲ್ಲಿ ಸಾಗಲಿವೆ. ನಾಡಿನ ಚರಿತ್ರೆಯನ್ನು ಕಟ್ಟಿಕೊಡುವ ಟ್ಯಾಬ್ಲೋಗಳು ತಯಾರಾಗುತ್ತಿದ್ದು, ಬುಧವಾರದ ವೇಳೆಗೆ ಅಂತಿಮ ಸ್ವರೂಪ ಸಿಗಲಿದೆ. ಜತೆಗೆ, 30 ಜಾನಪದ ಕಲಾ ತಂಡಗಳ ಸಾವಿರಕ್ಕೂ ಹೆಚ್ಚು ಕಲಾವಿದರು ಕಲೆಯನ್ನು ಪ್ರದರ್ಶಿಸುವ ಮೂಲಕ ಜಂಬೂ ಸವಾರಿಗೆ ಇನ್ನಷ್ಟು ಶೋಭೆ ತರಲಿದ್ದಾರೆ.
ಈ ಬಾರಿ ‘ಮೊದಲ’ ಸಲದ ಸರಮಾಲೆಗಳೇ ಜೋಡಣೆಯಾಗಿವೆ. ದೇಶರಕ್ಷಣೆಯ ಮೂರೂ ಪಡೆಗಳು (ಭೂಸೇನೆ, ನೌಕಾಸೇನೆ, ವಾಯುಸೇನೆ) ಭಾಗಿಯಾಗುತ್ತಿವೆ. ಸಾಂಸ್ಕೃತಿಕ ಉತ್ಸವದಲ್ಲೂ ಸೇನಾಶಕ್ತಿ ಅನಾವರಣವಾಗಲಿದೆ. ಇಷ್ಟು ದಿನ ಜಿಲ್ಲೆಗಳ, ಇಲಾಖೆಗಳ ಸ್ತಬ್ಧಚಿತ್ರಗಳಷ್ಟೇ ಇರುತ್ತಿದ್ದವು. ಈ ಸಲ ಬೇರೆ ರಾಜ್ಯಗಳ ಟ್ಯಾಬ್ಲೋಗಳೂ ಇರಲಿವೆ. ಈ ಹಿಂದೆ ಬೇರೆ ರಾಜ್ಯದ ಸಿಎಂಗಳು ಭಾಗಿಯಾಗಿರುವ ನಿದರ್ಶನಗಳಿಲ್ಲ. ಈ ಸಲ ಕೇರಳ, ತೆಲಂಗಾಣ ಸಿಎಂಗಳು ಬರಲಿದ್ದಾರೆ. ಹೊರದೇಶಗಳ ರಾಯಭಾರಿಗಳೂ ಭಾಗಿಯಾಗಲಿದ್ದಾರೆ. 45 ನಟ-ನಟಿಯರು ಪಾಲ್ಗೊಳ್ಳುತ್ತಿದ್ದಾರೆ.
ವಿಜಯದಶಮಿಗೆ ರಾಜಮನೆತನವೂ ಸಜ್ಜಾಗಿದೆ. ಅ.20ರಂದು ಆಯುಧ ಪೂಜೆ ನೆರವೇರಲಿದೆ. ಬಳಿಕ ಅರಮನೆಯ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಹಸು, ಒಂಟೆ, ಕುದುರೆ, ರಾಜಮನೆತನದ ವಾಹನಗಳು, ಅರಮನೆಯ ಪುರಾತನ ಕತ್ತಿ, ಈಟಿ, ಗುರಾಣಿ ಮುಂತಾದ ಆಯುಧಗಳಿಗೆ ಪೂಜೆ ನೆರವೇರಲಿದೆ. ವಿಜಯದಶಮಿ ದಿನ (ಅ.21) ವಜ್ರಮುಷ್ಟಿ ಕಾಳಗ ನಡೆಯಲಿದೆ. ವಿಜಯಯಾತ್ರೆ, ಬಳಿಕ ವಾಣಿವಿಲಾಸ ದೇವರ ಕೋಣೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ರ ಕಂಕಣ ವಿಸರ್ಜನೆ ನಂತರ ಚಾಮುಂಡೇಶ್ವರಿ ವಿಗ್ರಹವನ್ನು ಸ್ವಸ್ಥಾನ ಚಾಮುಂಡಿ ತೊಟ್ಟಿಗೆ ರವಾನಿಸುವ ಮೂಲಕ ರಾಜಮನೆತನದ ಶರನವರಾತ್ರಿಯ ಖಾಸಗಿ ದರ್ಬಾರ್ ಸಂಪನ್ನಗೊಳ್ಳಲಿದೆ.
ಮೈಮನ ರೋಮಾಂಚನಗೊಳಿಸುವ ಪಂಜಿನ ಕವಾಯತಿಗಾಗಿ (ಟಾರ್ಚ್ಲೈಟ್ ಪರೇಡ್) ಬನ್ನಿಮಂಟಪದಲ್ಲೂ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೂತನ ರಾಜ್ಯಪಾಲರಾದ ಸುಧಾ ಯಾದವ್ ಅವರಿಗೆ ಇದು ಮೊದಲ ದಸರೆ. ಬುಧವಾರ ರಾತ್ರಿ 7ಕ್ಕೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸುವರು. ಬಳಿಕ ಸೇನೆಯಿಂದ ಮೋಟರ್ ಸೈಕಲ್ ಸಾಹಸ ಪ್ರದರ್ಶನ, ಅಶ್ವದಳದಿಂದ ಸಾಹಸ ಪ್ರದರ್ಶನ, ಉತ್ತರ ಕರ್ನಾಟಕದ ಮಲ್ಲಕಂಬ ಪ್ರದರ್ಶನ, ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಪ್ರೇಕ್ಷಕರನ್ನು ಮನರಂಜಿಸಲಿದೆ.
ಜನಸಮೂಹವನ್ನು ಸೆಳೆಯುವ ಗಜಪಡೆ ಸಹ ತಾಲೀಮು ನಡೆಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಸಿದ್ಧವಾಗಿದೆ. 750 ಕೆಜಿ ತೂಕದ ಚಿನ್ನಲೇಪಿತ ಅಂಬಾರಿಯನ್ನು ಮೊದಲ ಬಾರಿಗೆ ಹೊರಲು ಪ್ರಶಾಂತ ಆನೆ ತಯಾರಾಗಿದೆ. ನುರಿತ ಮಾವುತ ಚಿನ್ನಪ್ಪ ಈ ಆನೆಯನ್ನು ಮುನ್ನಡೆಸಲಿದ್ದಾರೆ. ಮಾಜಿ ಅಂಬಾರಿ ಆನೆ ಅಭಿಮನ್ಯು ನಿಶಾನೆ ಆನೆಯಾಗಲಿದ್ದು, ನೌಪತ್ ಆನೆಯಾಗಿ ಗೋಪಿ, ಸಾಲಾನೆಯಾಗಿ ಮಹೇಂದ್ರ, ಶ್ರೀರಾಮ, ಶ್ರೀಕಂಠ, ಚೈತ್ರಾ, ಲಕ್ಷ್ಮೀ, ಸುಗ್ರೀವ್, ಏಕಲವ್ಯ ಸಾಗಲಿವೆ. ಕುಮ್ಕಿ ಆನೆಯಾಗಿ ಕಾವೇರಿ, ರೂಪಾ ಹೆಣ್ಣಾನೆಗಳು ‘ಪ್ರಶಾಂತ’ ಆನೆಯನ್ನು ನಿಯಂತ್ರಿಸಲಿವೆ.