ಥರಗುಟ್ಟಿಸುವ ಚಳಿ 
ರಾಜ್ಯ

ರಾಜ್ಯದಲ್ಲಿ ಮತ್ತೆ ಹೆಚ್ಚಿದ ಚಳಿ: ಹಲವೆಡೆ ಶೀತ ಅಲೆ ಎಚ್ಚರಿಕೆ-cold wave

ಬೆಂಗಳೂರು: ಶೀತಗಾಳಿ, ಮೋಡ ಕವಿದ ವಾತಾವರಣ ಮತು ಕನಿಷ್ಠ ತಾಪಮಾನ ಇಳಿಕೆ ಸೇರಿ ಹಲವು ಕಾರಣಗಳಿಂದ ರಾಜ್ಯದ ಹಲವೆಡೆ ಮತ್ತೆ ಥರಗುಟ್ಟಿಸುವ ಚಳಿ ಅನುಭವವಾಗುತ್ತಿದೆ.
ಕನಿಷ್ಠ ತಾಪಮಾನದಲ್ಲಿ ದಾವಣಗೆರೆ,ವಿಜಯಪುರ, ಬೀದರ್‌ನಲ್ಲಿ ತಲಾ 9, ಧಾರವಾಡ 9.8, ಚಿಂತಾಮಣಿ 10, ಗದಗ 10.8 ಮತ್ತು ಹಾವೇರಿ 10.6 ಡಿ.ಸೆ. ಗುರುವಾರ ದಾಖಲಾಗಿದೆ. ಮುಂದಿನ 5 ದಿನಗಳಲ್ಲಿ ಕೆಲ ಪ್ರದೇಶಗಳಲ್ಲಿ 3-5 ಡಿ.ಸೆ. ಉಷ್ಣಾಂಶ ಇಳಿಕೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮುಂದಿನ 2 ದಿನ ಶೀತ ಅಲೆ(ಕೋಲ್ಡ್‌ವೇವ್) ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರಾವಳಿ ಪ್ರದೇಶ ಹೊರತುಪಡಿಸಿ ಮೈಸೂರು, ಮಂಡ್ಯ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸಾಮಾನ್ಯಗಿಂತ 3-6 ಡಿ.ಸೆ. ಉಷ್ಣಾಂಶ ಇಳಿಕೆಯಾಗಿದೆ. ಕೆಲ ಪ್ರದೇಶಗಳಲ್ಲಿ ಮುಂಜಾನೆ ಮಂಜು ಕವಿದಿರುವ ವಾತಾವರಣ ನಿರ್ಮಾಣವಾಗಿದೆ.ಬೆಂಗಳೂರಿನಲ್ಲಿ ಮುಂದಿನ 3 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮುಂಜಾನೆ ವೇಳೆ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 15 ಡಿ.ಸೆ. ವರದಿಯಾಗಲಿದೆ.
ತುಂತುರು ಮಳೆ:
ಹವಾಮಾನ ಬದಲಾವಣೆಯಿಂದ ಬೆಂಗಳೂರು ನಗರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಮುಂದಿನ 5 ದಿನ ತುಂತುರು ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.