ಬೆಂಗಳೂರು: ಅರಬ್ಬಿಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ವಾತಾವರಣದಲ್ಲಿ ಬದಲಾವಣೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಚಳಿ ಮುಂದುವರಿದರೆ, ಕರಾವಳಿ ವ್ಯಾಪ್ತಿಯ ಭೌಗೋಳಿಕ ಪ್ರದೇಶಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಳವಾಗಿದೆ.
ದಾವಣಗೆರೆಯಲ್ಲಿ 11, ಕೋಲಾರದ ಟಮಕ ಗ್ರಾಮ 11.6, ಧಾರವಾಡ 12.4, ಬೀದರ್ 12.5 ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 12.8 ಡಿ.ಸೆ. ಕನಿಷ್ಠ ಉಷ್ಣಾಂಶ ಗುರುವಾರ ದಾಖಲಾಗಿದೆ.
ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಮಾತನಾಡಿ,ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 1-2 ಡಿ.ಸೆ.ಉಷ್ಣಾಂಶ ಕುಸಿತವಾಗಿದೆ. ಈ ಕಾರಣಗಳಿಂದ ರಾತ್ರಿ, ಮುಂಜಾನೆ ಥಂಡಿ ವಾತಾವರಣ ಕಾಣಿಸಿಕೊಳ್ಳುತ್ತಿದೆ. ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆವರೆಗೂ ಮಂಜು ಕವಿದ ವಾತಾವರಣ ಇದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 4 ದಿನ ಚಳಿ ಇರಲಿದೆ ಎಂದರು.
ಕೇರಳದ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಕರ್ನಾಟಕದ ಕರಾವಳಿ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನದಲ್ಲಿ 1 ಡಿ.ಸೆ. ಉಷ್ಣಾಂಶ ಏರಿಕೆಯಾಗಿದೆ. ಬಿಸಿಲಿನ ಜತೆಗೆ ತೇವಾಂಶ ಸೇರಿದ್ದರಿಂದ 36 ಡಿ.ಸೆ. ಉಷ್ಣಾಂಶ ಇದ್ದಾಗ ಕಂಡುಬರುವ ಬಿಸಿಲಿನ ತೀವ್ರತೆ 30 ಡಿ.ಸೆ. ಇದ್ದಾಗ ಕಂಡುಬರುತ್ತಿದ್ದು, ಈ ಕಾರಣದಿಂದ ಕರಾವಳಿ ಪ್ರದೇಶಗಳಲ್ಲಿ ಸುಡು ಬಿಸಿಲು ಹೆಚ್ಚಳವಾಗುತ್ತಿದೆ ಎಂದು ಮಾಹಿತಿ ನೀಡಿದರು.