ಬೆಂಗಳೂರಿನ 8 ಪ್ರತಿಷ್ಠಿತ ಕ್ಲಬ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ನೋಟಿಸ್ 
ರಾಜ್ಯ

ಜಿರಳೆ...ಅಸ್ವಚ್ಚತೆ...ಅವಧಿ ಮೀರಿದ ಅಡುಗೆ..: ಬೆಂಗಳೂರಿನ 8 ಪ್ರತಿಷ್ಠಿತ ಕ್ಲಬ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್! Bengaluru Clubs

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ 8 ಪ್ರತಿಷ್ಠಿತ ಕ್ಲಬ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆಯಿಂದ ನೋಟಿಸ್
  • ಅಡುಗೆ ಮನೆಯಲ್ಲಿ ಜಿರಳೆಗಳು, ಅಸ್ವಚ್ಚತೆ ಮತ್ತು ಅವಧಿ ಮೀರಿದ ಪದಾರ್ಥಗಳ ಬಳಕೆ ಬಯಲು
  • ಕುಡಿಯುವ ನೀರು, ಅಡುಗೆ ಎಣ್ಣೆ ಮಾದರಿ ಪ್ರಯೋಗಾಲಯ ಪರೀಕ್ಷೆಗೆ ರವಾನೆ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಆಹಾರಾ ಸುರಕ್ಷಾಧಿಕಾರಿಗಳು ತಪಾಸಣೆ, ದಾಳಿ ನಡೆಸಿ ಕುಂದು ಕೊರತೆ ಕಂಡುಬಂದ ಪಕ್ಷದಲ್ಲಿ ಪರವಾನಗಿ ರದ್ದು, ಮಳಿಗೆಗೆ ಬೀಗ ಹಾಗೂ ದಂಡ ವಿಧಿಸುತ್ತಿದ್ದಾರೆ.

ಇಂದು ಈ ದಾಳಿಗಳು ಬೆಂಗಳೂರಿನ ಕೆಲ ಖ್ಯಾತ ಕ್ಲಬ್ (Bengaluru Clubs) ​ಗಳ ಅಡುಗೆ ಮನೆ ಮೇಲೆ ನಡೆದಿದ್ದು, ಕಳಪೆ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲ ಕ್ಲಬ್​ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಎಲ್ಲೆಲ್ಲಿ ನಡೆದಿದೆ ಈ ತಪಾಸಣೆ?

ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಸಚಿವ ಯು.ಟಿ. ಖಾದರ್​​ ಅವರ ನಿರ್ದೇಶನದಂತೆ ಆಗಸ್ಟ್​ 25 ರಂದು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆಲ ಕ್ಲಬ್​ಗಳ ಮೇಲೆ ದಾಳಿ ನಡೆಸಲಾಗಿದ್ದು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2006, ನಿಯಮಗಳು 2011 ರ ಪ್ರಕಾರ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನ ಖ್ಯಾತನಾಮ ಕ್ಲಬ್​ಗಳಾದ ಸೆಂಚುರಿ ಕ್ಲಬ್​, KSCA ಕ್ಲಬ್​, ಬೌರಿಂಗ್​, ಕ್ಯಾಥೋಲಿಕ್​, ಟೆನಿಸ್​, ವಿಯಜನಗರ, ಮಹಾಲಕ್ಷ್ಮೀ ಲೇಔಟ್​, ಮಲ್ಲೇಶ್ವರಂ ಕ್ಲಬ್​ಗಳಲ್ಲಿ ಈ ತಪಾಸಣೆ ನಡೆದಿದೆ.

ಎಲ್ಲೆಲ್ಲಿ ಏನೇನು ಪತ್ತೆ? ಏನೇನು ಕ್ರಮ?

1. ಬೌರಿಂಗ್ ಕ್ಲಬ್​: ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಅಸ್ವಚ್ಚತೆ ಹಾಗೂ ಕೀಟಬಾಧೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
2. ಸೆಂಚುರಿ ಕ್ಲಬ್​: ತಪಾಸಣೆಯ ಸಂದರ್ಭದಲ್ಲಿ ಕೀಟಬಾಧೆ (Cockroach Infestation) ಹಾಗೂ ಅಸ್ವಚ್ಚ ಮತ್ತು ಅನೈರ್ಮಲ್ಯಕರ ಪರಿಸ್ಥಿತಿ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ.
3. KSCA ಕ್ಲಬ್, ಬೆಂಗಳೂರು: ವೈಯಕ್ತಿಕ ಸ್ವಚ್ಚತೆ ಕೊರತೆ, ಪ್ಲಾಸ್ಟಿಕ್​ ಕಟಿಂಗ್​ ಬೋರ್ಡ್​ ಬಳಕೆ, ಡ್ರೈನೇಜ್ ವ್ಯವಸ್ಥೆಯಲ್ಲಿ ತಡೆ, ಆಹಾರ ಲೇಬಲಿಂಗ್‌ಗೆ ಸಂಬಂಧಿಸಿದ ಉಲ್ಲಂಘನೆ, Frozen Storageನಲ್ಲಿ ಸ್ವಚ್ಛತೆಯ ಕೊರತೆ, ಸಸ್ಯಾಹಾರಿ/ಮಾಂಸಾಹಾರಿ ಆಹಾರ ಪದಾರ್ಥಗಳ ಅಸಮರ್ಪಕ ಸಂಗ್ರಹಣೆ ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿನೀರಿನ (Hot Water) ವ್ಯವಸ್ಥೆಯ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ KSCA Clubಗೆ ನೋಟಿಸ್ ಜಾರಿ ಮಾಡಲಾಗಿದೆ.
4. ಕ್ಯಾಥೋಲಿಕ್​ ಕ್ಲಬ್​: ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ, ಕೀಟಬಾಧೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಹಾಗೂ ಅವಧಿ ಮೀರಿದ 10 ಪ್ಯಾಕೆಟ್‌ಗಳ ಅಣಬೆ ಪದಾರ್ಥಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಕ್ಲಬ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
5. ಟೆನಿಸ್ ಕ್ಲಬ್: ನಿರ್ವಹಣಾ ಸಿಬ್ಬಂದಿಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರಗಳು ಲಭ್ಯವಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ.
6. ವಿಜಯನಗರ ಕ್ಲಬ್​: ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
7. ಮಹಾಲಕ್ಷ್ಮೀ ಲೇಔಟ್​: ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
8. ಮಲ್ಲೇಶ್ವರಂ ಕ್ಲಬ್: ಆಹಾರ ಪದಾರ್ಥಗಳ ಲೇಬಲಿಂಗ್‌ನಲ್ಲಿ ಉಲ್ಲಂಘನೆ, ಕೀಟಬಾಧೆ (Cockroach Infestation) ಹಾಗೂ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.
ತಪಾಸಣೆ ಸಂದರ್ಭದಲ್ಲಿ ಕುಡಿಯುವ ನೀರು ಹಾಗೂ ಅಡುಗೆಗೆ ಬಳಸುವ ಎಣ್ಣೆ ಮಾದರಿಗಳನ್ನು ಪ್ರಯೋಗಾಯಲಕ್ಕೆ ಕಳುಹಿಸಲಾಗಿದೆ. ವರದಿ ದೊರೆತ ನಂತರ ಅಲ್ಲಿ ದೊರೆಯುವ ಫಲಿತಾಂಶದ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಆಯುಕ್ತರು ತಿಳಿಸಿದ್ದಾರೆ.