ಹೂವಿನಹಡಗಲಿ: ಪಟ್ಟಣದ ಹರಪನಹಳ್ಳಿ ರಸ್ತೆಯಲ್ಲಿ ಗುರುವಾರ ಸಿಎನ್‌ಜಿ ಅನಿಲ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ಇಲ್ಲಿನ ತಿಪ್ಪಾಪುರ ರಸ್ತೆಯ ಬಿಪಿಸಿಎಲ್ ಘಟಕದಿಂದ ಬಳ್ಳಾರಿ ತಾಲೂಕಿನ ಕುಡುತಿನಿಗೆ 573 ಕೆಜಿ ಸಿಎನ್‌ಜಿ ಗ್ಯಾಸ್ ಸಾಗಿಸಲಾಗುತ್ತಿತ್ತು. ಲಾರಿಯು ಕೆಇಬಿ ವೃತ್ತದಿಂದ ಶಾಸ್ತ್ರೀ ವೃತ್ತಕ್ಕೆ ತಿರುಗುವಾಗ ಹಠಾತ್ ಪೈಪ್ ಕಟ್ ಆಗಿ ಗ್ಯಾಸ್ ಸೋರಿಕೆಯಾಗತೊಡಗಿದೆ. ಇದರಿಂದ ಗಾಬರಿಗೊಂಡ ಚಾಲಕ ವಿಶ್ವನಾಥ ಲಾರಿಯನ್ನು ರಸ್ತೆಬದಿಯಲ್ಲೇ ನಿಲ್ಲಿಸಿ ದೂರ ಓಡಿದ್ದಾರೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ರಸ್ತೆ ಸಂಚಾರ ಸ್ಥಗಿತಗೊಳಿಸಿ, ಟ್ಯಾಂಕ್‌ನಲ್ಲಿದ್ದ ಅನಿಲವನ್ನು ಸುರಕ್ಷಿತವಾಗಿ ಹೊರಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನೆಯಿಂದ ಅಂದಾಜು 48,705 ರೂ. ಮೌಲ್ಯದ ಗ್ಯಾಸ್ ನಷ್ಟವಾಗಿದೆ.
ಈ ಹಿಂದೆ ಮದಲಗಟ್ಟ ರಸ್ತೆಯಲ್ಲೂ ಇಂತಹುದೇ ಘಟನೆ ನಡೆದಿತ್ತು. ಕಂಪನಿಯು ಲಾರಿಗಳ ಸೂಕ್ತ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿರುವ ಸಾರ್ವಜನಿಕರು, ನಿರ್ಲಕ್ಷ್ಯ ವಹಿಸುತ್ತಿರುವ ಏಜೆನ್ಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.