ಕಾರ್ಮಿಕ ವಲಯಕ್ಕೆ ಭರಪೂರ ಕೊಡುಗೆ Budget 2026-27
Budget 2026-27: ಸರ್ಕಾರದ ಮುಂದಿನ ದಿಕ್ಸೂಚಿಯಾಗಿ ಇಂದು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕ ವಲಯಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹಾಗಿದ್ದರೆ, ಕಾರ್ಮಿಕರಿಗೆ ಸರ್ಕಾರ ಏನೆಲ್ಲಾ ಕೊಡುಗೆಗಳನ್ನು ನೀಡಿದೆ ಎಂದು ನಾವೀಗ ತಿಳಿದುಕೊಳ್ಳೋಣ..
* ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಬಿತರಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ಒಟ್ಟು 43,936 ಅರ್ಹ ಫಲಾನುಭವಿಗಳಿಗೆ ಒಟ್ಟು 39 ಕೋಟಿ ರೂ.ಗಳ ಧನಸಹಾಯ ನೀಡಲಾಗಿದೆ.
* ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 5,062 ಅಭ್ಯರ್ಥಿಗಳ ಪರವಾಗಿ18 ಕೋಟಿ ರೂ.ಗಳನ್ನು ಅರ್ಹ ಉದ್ಯೋಗದಾತರಿಗೆ ಮರುಪಾವತಿಸಲಾಗಿದೆ.
* ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ತಲಾ 60 ಕೋಟಿ ರೂ. ವೆಚ್ಚದಲ್ಲಿ 10 GTTC ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಒಟ್ಟಾರೆ 600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು.
* 6 ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ 2025-26ನೇ ಸಾಲಿನಲ್ಲಿ 42 ಶ್ರಮಿಕ ವಸತಿ ಶಾಲೆಗಳನ್ನು ಅನುಮೋದಿಸಲಾಗಿದೆ. 2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 6೨ ಶ್ರಮಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಎಲ್ಲಾ 10೪ ಶಾಲೆಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಲಾಗುವುದು.
* ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತಿ ಕೌಶಲ್ಯ ತರಬೇತಿಯನ್ನು ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅತ್ಯಾಧುನಿಕ ಮೂಲಸೌಕರ್ಯವನ್ನು ಒಳಗೊಂಡ ಕೌಶಲ್ಯ ತರಬೇತಿ ಅಕಾಡೆಮಿಯನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯಾಧಾರಿತ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಆನ್ಲೈನ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸುವ ʻಕಾಯಕ ಭಾಗ್ಯʼ ಎಂಬ ಯೋಜನೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗುವುದು.
* ಕಾರ್ಮಿಕ ರಾಜ್ಯ ವಿಮಾ ಸೊಸೈಟಿಯ ರಚನೆಯಿಂದಾಗಿ ಪ್ರಸ್ತುತ ನೀಡಲಾಗುತ್ತಿರುವ ವೈದ್ಯಕೀಯ ಸೇವೆಗಳನ್ನು 50 ಲಕ್ಷ ವಿಮಾದಾರರಿಗೆ ಹಾಗೂ 150 ಲಕ್ಷ ಅವಲಂಬಿತರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಲಾಗುವುದು. ಈ ಸೊಸೈಟಿಯ ಮುಖಾಂತರ ಕೆಳಕಂಡ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು.
* ಹುಬ್ಬಳ್ಳಿ, ಇಂದಿರಾನಗರ, ಮೈಸೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಇಂದಿರಾನಗರದಲ್ಲಿ ಮೂರು ವರ್ಷದ PG (DNB) ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು.
* ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮತ್ತು ತಡೆಗಟ್ಟುವ ಲಸಿಕಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು.
* ರಾಯಚೂರು, ವಿಜಯಪುರ, ಬಾಗಲಕೋಟೆ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆ.ಜಿ.ಎಫ್ ಮತ್ತು ಚಿಕ್ಕಮಗಳೂರಿನಲ್ಲಿರುವ ಕಾರ್ಮಿಕ ರಾಜ್ಯ ವಿಮಾ (ESI) ಚಿಕಿತ್ಸಾಲಯಗಳನ್ನು ಉನ್ನತೀಕರಿಸಲಾಗುವುದು.
ಸಿಎಂ ದಾಖಲೆ ಬಜೆಟ್
ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ. ಸುಮಾರು 4.48 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.