ಹೊಸಕೋಟೆ ನಗರದ ಆಕಾಶವಾಣಿ ಬಡಾವಣೆಯಲ್ಲಿ ಯಾದವ ಭವನವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ತಾಲೂಕು ಯಾದವ ಸಂದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್, ಯಾದವ ಯುವ ವೇದಿಕೆ ರಾಜ್ಯಾಧ್ಯಕ್ಷ ಸುನಿಲ್ ಯಾದವ್, ತಾಲೂಕು ಅಧ್ಯಕ್ಷ ಎ.ಸಂತೋಷ್ ಕುಮಾರ್ ಇದ್ದರು.
ಹೊಸಕೋಟೆ : ನಗರದಲ್ಲಿ ಯಾದವ ಜನಾಂಗದ ಹಲವು ವರ್ಷಗಳ ಬೇಡಿಕೆಯಾದ ಭವನ ನಿರ್ಮಾಣದ ಕನಸು ನನಸಾಗಿದ್ದು, ಸರಳವಾಗಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಭವನ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಆಕಾಶವಾಣಿ ಬಡಾವಣೆಯಲ್ಲಿ ನಿರ್ಮಿಸಿರುವ ಯಾದವ ಭವನದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019ರಲ್ಲಿ ಯಾದವ ಭವನದ ಕಾಮಗಾರಿ ಪ್ರಾರಂಭಗೊಂಡು ಏಳು ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಹಂತಕ್ಕೆ ತಲುಪಿದೆ. ಶಾಸೊಕ್ತವಾಗಿ, ಪೂಜಾ ಕಾರ್ಯ ನೆರವೇರಿಸಿ ಉದ್ಘಾಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಿ ಲೋಕಾರ್ಪಣೆ ಮಾಡಲಿದ್ದೇವೆ ಎಂದರು.
ತಾಲೂಕು ಯಾದವ ಸಂದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ ಮಾತನಾಡಿ, ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಯಾದವ ಭವನ ನಿರ್ಮಿಸಿದ್ದು, ಸಮುದಾಯದ ಬಡ ಮಧ್ಯಮ ವರ್ಗದವರು ಮದುವೆ ಶುಭ ಸಮಾರಂಭ ಮಾಡಿಕೊಳ್ಳಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಸಮುದಾಯದಿಂದ ವಸತಿ ನಿಲಯ ಸ್ಥಾಪಿಸಿ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಳ್ಳುವ ಚಿಂತನೆ ಮಾಡಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ವಿ ಪ್ರಸಾದ್ ಮಾತನಾಡಿ, ಭವನದ ಮೇಲ್ಭಾಗದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ಹಾಗೂ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಸಮುದಾಯ ಭವನದಲ್ಲಿ ಕೇವಲ ಯಾದವ ಜನಾಂಗಕ್ಕೆ ಮಾತ್ರವಲ್ಲದೆ ಎಲ್ಲ ಸಮುದಾಯದ ಶುಭ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಭೂ ನ್ಯಾಯ ಮಂಡಳಿ ಸದಸ್ಯ ಪಿಕೆಎಸ್ ಶ್ರೀನಿವಾಸ್, ರಾಮೇಗೌಡ, ಕೇಬಲ್ ಶ್ರೀನಿವಾಸಯ್ಯ, ಮುಖಂಡರು ಇದ್ದರು.
ಹೊಸಕೋಟೆ ತಾಲೂಕಿನಲ್ಲಿ ಯಾದವ ಸಮುದಾಯದ ಮುಖಂಡರ ಪರಿಶ್ರಮದ ಫಲವಾಗಿ ರಾಜ್ಯದಲ್ಲಿ ಎಲ್ಲಿಯೂ ಇರದ ರೀತಿಯಲ್ಲಿ ಯಾದವ ಭವನ ನಿರ್ಮಾಣ ಮಾಡಲು ಸಾಕಾರವಾಗಿದೆ. ಇದೇ ರೀತಿ ಸಮುದಾಯ ಒಗ್ಗಟ್ಟಿನಿಂದ ಸರ್ಕಾರದ ಮಟ್ಟದಲ್ಲಿ ಸವಲತ್ತು ಪಡೆದುಕೊಳ್ಳಲು ಮುಂದಾಗಬೇಕು.
— > ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಚಿತ್ರದುರ್ಗ ಯಾದವ ಗುರುಪೀಠದ ಜಗದ್ಗುರು