CM Siddaramaiah 
ರಾಜ್ಯ

ಉಪಚುನಾವಣೆ 'ಕೈ'ವಶ; ಇದು ನಮ್ಮ ಸರ್ಕಾರದ ಸಾಧನೆಗೆ ಸಂದ ಜಯ: ಪಂಚರಾಜ್ಯ ಫಲಿತಾಂಶಕ್ಕೆ CM Siddaramaiah ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದು, ಈ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಸಾಧನೆಗಳಿಗೆ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ಸಂದ ಜಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಸೋಮವಾರ ಫಲಿತಾಂಶದ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ ಅವರು, "ವಿರೋಧ ಪಕ್ಷಗಳು ನಡೆಸಿದ ಅಪಪ್ರಚಾರ ಮತ್ತು ಹಣದ ಪ್ರಭಾವದ ಹೊರತಾಗಿಯೂ ಮತದಾರರು ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟು ಹರಸಿದ್ದಾರೆ. ಈ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯದ ಜನತೆ ನಮಗೆ ಇದೇ ರೀತಿ ಬೆಂಬಲ ನೀಡಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇರಳದಲ್ಲಿ ಕಾಂಗ್ರೆಸ್ ವಿಜಯೋತ್ಸವ: ರಾಹುಲ್-ಪ್ರಿಯಾಂಕಾ ಶ್ರಮಕ್ಕೆ ಮೆಚ್ಚುಗೆ

ನೆರೆಯ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸಾಧಿಸಿರುವ ಗೆಲುವನ್ನು ಸ್ವಾಗತಿಸಿದ ಸಿಎಂ, "ಕರ್ನಾಟಕ ಮತ್ತು ತೆಲಂಗಾಣದಂತೆ ಕೇರಳ ಮತ್ತು ತಮಿಳುನಾಡಿನಲ್ಲೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಜಾಗವಿಲ್ಲ ಎಂಬುದು ಸಾಬೀತಾಗಿದೆ. ಕೇರಳದಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದವರೆಗೆ ಸಂಘಟಿತ ಹೋರಾಟ ನಡೆದಿದೆ. ವಿಶೇಷವಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಹಗಲಿರುಳ ಶ್ರಮ ಈ ಗೆಲುವಿಗೆ ಕಾರಣ," ಎಂದು ಅಭಿನಂದಿಸಿದರು. ಕೇರಳದಲ್ಲಿ ಶೀಘ್ರದಲ್ಲೇ ಶಾಸಕಾಂಗ ಸಭೆ ನಡೆಸಿ ಮುಂದಿನ ಸಿಎಂ ಆಯ್ಕೆ ಮಾಡಲಾಗುವುದು ಮತ್ತು ಅಲ್ಲಿಯೂ ಕರ್ನಾಟಕದಂತೆ 'ನುಡಿದಂತೆ ನಡೆಯುವ' ಸರ್ಕಾರ ಬರಲಿದೆ ಎಂದರು.

ಬಂಗಾಳದಲ್ಲಿ ಬಿಜೆಪಿ ಗೆಲುವು 'ಪ್ರಜಾಪ್ರಭುತ್ವದ ಸೋಲು'

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸೋಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವದ ಸೋಲು ಎಂದು ಕರೆದರು. "ಮಮತಾ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದು ಸಹಜ. ಆದರೆ, ಕೇಂದ್ರ ಚುನಾವಣಾ ಆಯೋಗದ ಕೈವಾಡ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದ ಮೋಸದಿಂದ ಅವರು ಸೋತಿದ್ದಾರೆ. ಲಕ್ಷಾಂತರ ಪ್ರಗತಿಪರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಬಿಜೆಪಿ ಸರ್ಕಾರಿ ಯಂತ್ರ, ತೋಳ್ಬಲ ಮತ್ತು ಹಣಬಲ ಬಳಸಿ ಗೆಲುವು ಸಾಧಿಸಿದೆ. ಧಾರ್ಮಿಕ ಧ್ರುವೀಕರಣದ ಕುತಂತ್ರಕ್ಕೆ ಬಂಗಾಳದ ಜನ ಬಲಿಯಾಗಿದ್ದಾರೆ," ಎಂದು ಕಿಡಿಕಾರಿದರು.

ತಮಿಳುನಾಡಿನಲ್ಲಿ ವಿಜಯ್ ಅಬ್ಬರ

ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಜನಪರ ಆಡಳಿತಕ್ಕೆ ಸೋಲಾಗಿರುವುದು ನಿರೀಕ್ಷಿತವಾಗಿರಲಿಲ್ಲ. ತಮಿಳು ಮತದಾರರು ಸಿನೆಮಾ ನಟ ವಿಜಯ್ ಅವರ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ. ಇದು ದ್ರಾವಿಡ ಚಳವಳಿಯ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆ," ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರಿಗೆ ಹಾರೈಸಿದ ಸಿಎಂ, ಸ್ಟಾಲಿನ್ ಅವರು ಶೀಘ್ರದಲ್ಲೇ ಈ ಸೋಲಿನಿಂದ ಚೇತರಿಸಿಕೊಳ್ಳಲಿದ್ದಾರೆ ಎಂದು ಆಶಿಸಿದರು.