ಬಜೆಟ್‌ನಲ್ಲಿ ವಸತಿ ರಹಿತರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ 
ರಾಜ್ಯ

ರಾಜ್ಯ ಬಜೆಟ್​: ಮೂರು ಲಕ್ಷ ಕುಟುಂಬಗಳಿಗೆ ಮನೆ ನಿರ್ಮಾಣ; ವಿವಿಧ ವಸತಿ ಯೋಜನೆಗಳನ್ನು ಘೋಷಿಸಿದ ಸಿಎಂ ಸಿದ್ದರಾಮಯ್ಯ | CM Siddaramaiah Budget

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಬಜೆಟ್​ 2026 ಮಂಡನೆ
  • ಬಜೆಟ್‌ನಲ್ಲಿ ವಸತಿ ರಹಿತರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ
  • ರಾಜ್ಯದ 3 ಲಕ್ಷ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಬೃಹತ್ ಯೋಜನೆ ಘೋಷಣೆ
ಬೆಂಗಳೂರು: ಶುಕ್ರವಾರ (ಮಾ.6) ಸಿಎಂ ಸಿದ್ದರಾಮಯ್ಯನವರು 2026-27 ನೇ ಸಾಲಿನ ಬಜೆಟ್​ನ್ನು ಮಂಡಿಸಿದ್ದು, ಇದು ಸಿದ್ದರಾಮಯ್ಯ (CM Siddaramaiah Budget) ಅವರು ಮಂಡಿಸಿದ 17 ನೇ ಬಜೆಟ್​ ಆಗಿದೆ.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ವಸತಿ ಯೋಜನೆಗಳಡಿಯಲ್ಲಿ 7,328 ಕೋಟಿ ರೂ.ಗಳ ಮೊತ್ತದಲ್ಲಿ ಒಟ್ಟಾರೆ 4,19,454 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೆವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ

ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಸತಿ ಯೋಜನೆಗಳಡಿ BLC ಆಧಾರಿತ ಒಂದು ಲಕ್ಷ ಮನೆಗಳ ಹೊಸ ಗುರಿಯನ್ನು ಮಂಜೂರು ಮಾಡಲಾಗುವುದು. ಸದರಿ ಗುರಿಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು 1.20 ಲಕ್ಷ ರೂ. ಗಳಿಂದ 2 ಲಕ್ಷ ರೂ.ಗಳಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 2 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು. ರಾಜ್ಯ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆಯ ಮುಖಾಂತರ ಆಯ್ಕೆಗೊಳಿಸಲಾಗುತ್ತಿದ್ದು, ಇನ್ನು ಮುಂದೆ ಆನ್ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಆಯ್ಕೆಗೊಳಿಸಲಾಗುವುದು ಎಮದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಎ.ಹೆಚ್.ಪಿ) 1.29 ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರದಿಂದ 1,136 ಕೋಟಿ ರೂ.ಗಳ ಅನುದಾನವನ್ನು ಹೆಚ್ಚುವರಿಯಾಗಿ ಫಲಾನುಭವಿಗಳ ವಂತಿಕೆಗೆ ಎದುರಾಗಿ ಒದಗಿಸಿ 2025-26ನೇ ಸಾಲಿಗೆ ಒಟ್ಟಾರೆ 79,134 ಮನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಕೊಳಗೇರಿ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿದಂತಾಗಿದೆ ಎಂದು ಸಿಎಂ ತಿಳಿಸಿದರು.
ʻಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮʼ ಎಂಬ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ 80,000 ಆಸನ ಸಾಮರ್ಥ್ಯವುಳ್ಳ ಕ್ರಿಕೆಟ್ ಕ್ರೀಡಾಂಗಣ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸಲು ಅನುಕೂಲವಾಗುವಂತೆ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಕೆ.ಹೆಚ್.ಬಿ. ವತಿಯಿಂದ ನಮ್ಮ ಮನೆ ಯೋಜನೆಯಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ನಿವೇಶನಗಳನ್ನು ರಿಯಾಯತಿ ದರದಲ್ಲಿ ವಿತರಿಸಲು ಉದ್ದೇಶವನ್ನು ಹೊಂದಿದ್ದೆವೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಸಿಎಂ ದಾಖಲೆ ಬಜೆಟ್​

ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ.
ಸುಮಾರು 4.2 ರಿಂದ 4.5 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.