Siddaramaiah resignation Breakfast meeting 
ರಾಜ್ಯ

ಇಂದು ಸಿಎಂ ಸಿದ್ದರಾಮಯ್ಯ ರಾಜೀನಾಮೆ?: ಬ್ರೇಕ್​ ಫಾಸ್ಟ್​ ಸಭೆ ನಿಮಿತ್ತ ಸಿಎಂ ನಿವಾಸಕ್ಕೆ ಸಚಿವರ ದಂಡು!..Siddaramaiah

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿಗಳ ನಿವಾಸಕ್ಕೆ ಸಚಿವರ ಭೇಟಿ
  • ಮಧ್ಯಾಹ್ನ 3:30ರ ಬಳಿಕ ಲೋಕ ಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಕೆ?
  • ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಂದು ರಾತ್ರಿಯೇ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ
ಬೆಂಗಳೂರು:  ಕರ್ನಾಟಕ  ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ವಿಚಾರವು ಸಾಕಷ್ಟು ಕಾವೇರಿದ್ದು, ಕ್ಷಣಕ್ಷಣಕ್ಕೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ದೆಹಲಿ ಹೈಕಮಾಂಡ್​ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿ ಗಾಢವಾಗಿ ಎಲ್ಲೆಡೆ ಪಸರಿಸಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಸಾಕಷ್ಟು ಕುತೂಹಲ ಮನೆ ಮಾಡಿದೆ. ಜೊತೆಗೆ ಸಿಎಂರವರ ಕಾವೇರಿ ನಿವಾಸದಲ್ಲಿ ಹೈವೋಲ್ಟೇಜ್ ಸಭೆಗಳು ನಡೆಯುತ್ತಿವೆ.
ಸಿಎಂ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗಿನ ಉಪಹಾರ ಏರ್ಪಡಿಸಿದ್ದಾರೆ. ಈ ಹಿನ್ನೆಲೆ ಸಚಿವರು ಸಿಎಂ‌ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿಯವರೆಗೂ  ಎಂಟು ಸಚಿವರು ಹಾಜರಾಗಿದ್ದಾರೆ. ಮಧ್ಯಾಹ್ನ 3.30ರ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿದ್ದು, ಆನಂತರ ರಾತ್ರಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. 

ಯಾರ್ಯಾರೆಲ್ಲ ಬಂದಿದ್ದಾರೆ?

ಸಚಿವರಿಗೆ ಸಿಎಂ ಅವರಿಂದ ಉಪಹಾರ ವ್ಯವಸ್ಥೆ ಹಿನ್ನೆಲೆ ಸಿಎಂ ಮನೆಯಿಂದಲೇ ಇಡ್ಲಿ, ವಡಾ, ಉಪ್ಪಿಟ್ಟು, ಕೇಸರಿಬಾತ್, ದೋಸೆ, ಪೊಂಗಲ್ ಉಪಹಾರ ತಯಾರಿಯಾಗಿದೆ. ಈಗಾಗಲೇ ಸಚಿವರಾದ ಎಂ ಸಿ ಸುಧಾಕರ್, ಬೈರತಿ ಸುರೇಶ್ , ಸಂತೋಷ್ ಲಾಡ್  ಸಿಎಂ ನಿವಾಸಕ್ಕೆ ತೆರಳಿದ್ದಾರೆ. ಹಾಗೂ ಡಿಕೆ ಶಿವಕುಮಾರ್​ ಅವರು ಸಹ ತೆರಳಿದ್ದಾರೆ.
ಉಭಯ ನಾಯಕರ ಒಗ್ಗಟ್ಟು ಪ್ರದರ್ಶನ, ಪರಸ್ಪರ ವಿಶ್ವಾಸ ಗಳಿಸುವ ಯತ್ನವಾಗಿ ಈ ಉಪಹಾರ ಕೂಟ ಏರ್ಪಡಿಸಲಾಗಿದೆ. ಸುಗಮ ನಾಯಕತ್ವ ಬದಲಾವಣೆಯ ಸೂತ್ರದ ಪ್ರಕಾರ ಯಾವುದೇ ಗೊಂದಲ, ಅವಿಶ್ವಾಸಕ್ಕೆ ಎಡೆ ಮಾಡಿಕೊಡದಂತೆ ಈ ಉಪಹಾರ ಕೂಟದ ಉದ್ದೇಶ ಎನ್ನಲಾಗುತ್ತಿದೆ.

ಡಿಕೆಶಿ ನಿವಾಸದ ಮುಂದೆ ಅಭಿಮಾನಿಗಳ ದಂಡು

ಮುಂದಿನ ಸಿಎಂ ಡಿಕೆ ಶಿವಕುಮಾರ್​ ಎಂಬ ಅಧಿಕೃತ ಮಾಹಿತಿ ಹೊರ ಬೀಳದೆ ಇದ್ದರೂ ಸಹ,   ಅವರ ಸದಾಶಿವನಗರ ನಿವಾಸದ ಮುಂದೆ ಅಭಿಮಾನಿಗಳು ಈಗಿನಿಂದಲೇ ಜಮಾಯಿಸಿದ್ದು, ಹೂಗುಚ್ಛ ಹಿಡಿದು ಕಾಯುತ್ತಿದ್ದಾರೆ. ಸದ್ಯ ಕುಣಿಗಲ್ ರಂಗನಾಥ್ ಮಾತ್ರ ಡಿಕೆಶಿ ನಿವಾಸದಲ್ಲಿದ್ದು, ಬೇರೆ ಪ್ರಮುಖ ನಾಯಕರು ಕಾಣಿಸಿಕೊಳ್ಳದಿರುವುದು ತೀವ್ರ ಅಚ್ಚರಿ ಮೂಡಿಸಿದೆ. 

ಇಂದು ರಾಜೀನಾಮೆ?

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆದ ಮ್ಯಾರಾಥಾನ್ ಸಭೆಗಳ ಬಳಿಕ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವ ನಿಟ್ಟಿನಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಂಡಿದೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ಥಾನ ತೆರವುಗೊಳಿಸಲು ಸಜ್ಜಾಗಿದ್ದಾರೆ ಎನ್ನುವ ಊಹಾಪೋಹಗಳು ಮನೆ ಮಾಡಿದೆ.

ರಾಜ್ಯಪಾಲರು ಬೆಂಗಳೂರಿನಲ್ಲಿಲ್ಲ 

ಮುಖ್ಯಮಂತ್ರಿಗಳು ಮಧ್ಯಾಹ್ನ 3:30 ರ ಸುಮಾರಿಗೆ ರಾಜೀನಾಮೆ ನೀಡಲು ಸಮಯ ನಿಗದಿಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದರೂ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಪತ್ನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ, ಅವರು ತುರ್ತು ಕಾರಣಕ್ಕೆ ಇಂದೋರ್​ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಅವರು ಮರಳಿ ಬರುವ ಸಮಯ ನಿಗದಿಯಾಗಿಲ್ಲ.

ದೆಹಲಿಗೆ ಇಂದೇ ಪ್ರಯಾಣ

ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರು? ಮತ್ತು ಸಚಿವ ಸಂಪುಟ ಪುನಾರಚನೆ ಹೇಗೆ ಎಂಬ ಸೂತ್ರವನ್ನು ಅಂತಿಮಗೊಳಿಸಲು ಇಂದು ರಾತ್ರಿಯೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹಾರಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಮುಂದಿನ ರಾಜಕೀಯ ತೀರ್ಮಾನಗಳು ಹೊರಬೀಳಲಿವೆ, (ಏಜೆನ್ಸೀಸ್).