Election Results 2026  
ರಾಜ್ಯ

Election Results 2026: ಕೇರಳದಲ್ಲಿ ನಿರೀಕ್ಷೆಗೂ ಮೀರಿದ ಗೆಲುವು, ತಮಿಳುನಾಡಿನಲ್ಲಿ ವಿಜಯ್‌ಗೆ ಅಭಿನಂದನೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ(Election Results 2026) ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೇರಳದಲ್ಲಿ ನಾವು ಸುಮಾರು 76 ರಿಂದ 80 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದೆವು. ಆದರೆ ಪ್ರಸ್ತುತ ಟ್ರೆಂಡ್ ಗಮನಿಸಿದರೆ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ಇದು ನಮ್ಮ ನಿರೀಕ್ಷೆಯನ್ನು ಮೀರಿದ ಫಲಿತಾಂಶ," ಎಂದರು. ಇದೇ ವೇಳೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು ಎಂದು ಅಭಿಪ್ರಾಯಪಟ್ಟ ಅವರು, ತಮಿಳುನಾಡಿನಲ್ಲಿ ಮುನ್ನಡೆ ಸಾಧಿಸಿರುವ ಟಿವಿಕೆ ಪಕ್ಷದ ನಟ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಸ್ಸಾಂ ಫಲಿತಾಂಶವನ್ನು ಸಹಜವಾಗಿ ಸ್ವೀಕರಿಸುವುದಾಗಿ ಅವರು ತಿಳಿಸಿದರು.

ಕೆ.ಸಿ. ರೆಡ್ಡಿ ಆಡಳಿತ ನಮಗೆ ದಾರಿದೀಪ

ಇದಕ್ಕೂ ಮುನ್ನ, ರಾಜ್ಯದ ಮೊದಲ ಮುಖ್ಯಮಂತ್ರಿ ದಿವಂಗತ ಕೆ.ಸಿ. ರೆಡ್ಡಿ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿಗಳು ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ, "ಕೆ.ಸಿ. ರೆಡ್ಡಿಯವರು ಸಮರ್ಥ ಮತ್ತು ಪ್ರಾಮಾಣಿಕ ಆಡಳಿತಗಾರರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಅವರು ಪಾಲಿಸಿದ ಮೌಲ್ಯಗಳು ಇಂದಿಗೂ ನಮಗೆ ದಾರಿದೀಪ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು, ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು," ಎಂದು ಸ್ಮರಿಸಿದರು.
ರಾಜ್ಯದ ಕೈಗಾರಿಕಾ ಪ್ರಗತಿಗೆ ರೆಡ್ಡಿಯವರ ಕೊಡುಗೆಯನ್ನು ಸ್ಮರಿಸಿದ ಸಿದ್ದರಾಮಯ್ಯ, "ಇಂದು ಕರ್ನಾಟಕದಲ್ಲಿ ಐಟಿಐ, ಎಚ್‌ಎಂಟಿ, ಇಸ್ರೋ ಅಂತಹ ಪ್ರತಿಷ್ಠಿತ ಸಂಸ್ಥೆಗಳು ನೆಲೆಯೂರಲು ಅವರ ದೂರದೃಷ್ಟಿಯೇ ಕಾರಣ," ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ

ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಫಲಿತಾಂಶದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, "ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ದಾವಣಗೆರೆಯಲ್ಲಿ ಸ್ಥಳೀಯ ಕಾರಣಗಳಿಂದ ಗೆಲುವಿನ ಅಂತರ ಸ್ವಲ್ಪ ಕಡಿಮೆಯಾಗಬಹುದು, ಆದರೆ ಗೆಲುವು ಮಾತ್ರ ನಮ್ಮದೇ," ಎಂದು ಭವಿಷ್ಯ ನುಡಿದರು.