108 Command Control centre  
ರಾಜ್ಯ

108 ಕೇಂದ್ರೀಕೃತ ಕಮಾಂಡ್, ಕಂಟ್ರೋಲ್ ಸೆಂಟರ್‌ಗೆ ಸಿಎಂ ಚಾಲನೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ರಾಜ್ಯದಲ್ಲಿ ಆಂಬುಲೆನ್ಸ್‌ಗಳ ಸೇವೆ ಮತ್ತಷ್ಟು ಪರಿಣಾಮಕಾರಿ
  • * ಸುವರ್ಣ ಸಮಯದಲ್ಲಿ ರೋಗಿಗಳಿಗೆ ನೆರವು
ಬೆಂಗಳೂರು: ಅಪಘಾತ, ಹೃದಯಾಘಾತ ಸೇರಿ ತುರ್ತು ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು 108 ಆರೋಗ್ಯ ಕವಚ ಆಂಬುಲೆನ್ಸ್‌ಗಳ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’ ಎಂಬ ೋಷವಾಕ್ಯದಡಿ ರೂಪಿಸಿರುವ 108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ನಗರದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಗಂಭೀರ, ಕ್ಲಿಷ್ಟ ಆರೋಗ್ಯ ಪರಿಸ್ಥಿತಿ ಎದುರಿಸುವವರಿಗೆ ತುರ್ತು ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದೊಂದಿಗೆ 18 ವರ್ಷಗಳಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಈ ಸೆಂಟರ್ ನೆರವಾಗಲಿದೆ. ಹಿಂದಿನ ಬಜೆಟ್‌ನಲ್ಲಿ ೋಷಿಸಿದಂತೆ ಜಾರಿಗೊಳಿಸಲಾಗಿದೆ ಎಂದರು.
ಜೀವನ್ಮರಣದ ಹೋರಾಟದಲ್ಲಿ ತುರ್ತು ಚಿಕಿತ್ಸೆ ಮಹತ್ವ ಹೊಂದಿದ್ದು, ಸುವರ್ಣ ಸಮಯ(ಗೋಲ್ಡನ್ ಅವರ್ಸ್‌)ದಲ್ಲಿ ಚಿಕಿತ್ಸೆ ದೊರೆಯುವುದರಿಂದ ಶೇ.80ಕ್ಕೂ ಅಧಿಕ ರೋಗಿಗಳು ಬದುಕುಳಿದಿದ್ದಾರೆ. ಈ ನಿಟ್ಟಿನಲ್ಲಿ ಸೆಂಟರ್ ಪ್ರಾರಂಭಿಸುವ ಮೂಲಕ ಸಾಮಾನ್ಯರಿಗೆ ಗುಣಮಟ್ಟದ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು, ಬೆಂಗಳೂರಿನಲ್ಲಿ ಪ್ರಸ್ತುತ ತುರ್ತು ಆರೋಗ್ಯ ಸೇವೆ ಒದಗಿಸುವ 65 ರಿಂದ 70 ಆಂಬುಲೆನ್ಸ್‌ಗಳಿವೆ ಎಂದು ಸಿಎಂ ಹೇಳಿದರು.

ರಾಜ್ಯಾದ್ಯಂತ ವಿಸ್ತರಣೆ:

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 108 ಸೇವೆಯನ್ನು ಸರ್ಕಾರವೇ ನಿರ್ವಹಿಸಲು ನಿರ್ಧರಿಸಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ. ಈ ಸಂಬಂಧ ಸಿಂಗಾಪುರ ಸೇರಿ ಹಲವೆಡೆಯ ಮಾದರಿ ಬಗ್ಗೆ ಅಧ್ಯಯನ ನಡೆಸಿ ಕ್ರಮವಹಿಸಲಾಗಿದೆ. ಮೊದಲು ಚಾಮರಾಜನಗರದಲ್ಲಿ ಬಳಿಕ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದರು.

ಮೂರ‌್ನಾಲ್ಕು ತಿಂಗಳಲ್ಲಿ ಸರ್ಕಾರದ ಸುಪರ್ದಿಗೆ

ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಎಂಡಿಟಿ ಟ್ಯಾಬ್ಲೆಟ್ ಒದಗಿಸಲಾಗಿದೆ. ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸಿಬ್ಬಂದಿ ರೋಗಿಯ ವಿವರ ಪಡೆದು ಹತ್ತಿರದ 108ಗೆ ಸಂದೇಶ ರವಾನಿಸುತ್ತಾರೆ. ಎಂಡಿಟಿ ಮೂಲಕ ಸಂದೇಶ ಸ್ವೀಕರಿಸುವ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ತೆರಳಿ ರೋಗಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ( ಬಯಸಿದಲ್ಲಿ ಖಾಸಗಿ ಆಸ್ಪತ್ರೆ) ಕರೆದೊಯ್ಯಲಿದೆ. ಈ ಸಂದರ್ಭದಲ್ಲಿ ವಾಹನದ ಪ್ರತಿ ಚಲನೆ ಕಮಾಂಡ್ ಸೆಂಟರ್‌ನಲ್ಲಿ ತಿಳಿಯಲಿದೆ. ಜತೆಗೆ ಆಸ್ಪತ್ರೆಯ ವಿವರ ಸೇರಿ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಏಜೆನ್ಸಿಯ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏಕೀಕೃತ ತುರ್ತು ವೇದಿಕೆ

ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಸುಧಾರಿತ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ. ರಾಜ್ಯದ 108 ಇದರಡಿ ಕೆಲಸ ನಿರ್ವಹಿಸಲಿವೆ. ಹೊಸ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ 108 ಆರೋಗ್ಯ ಕವಚ ಮತ್ತು 104 ಆರೋಗ್ಯ ಸಹಾಯವಾಣಿ ಸೇವೆಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುತ್ತದೆ. ಇದು 112 ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ, 181 ಮಹಿಳಾ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ, ಟೆಲಿಮಾನಸ್ ಮತ್ತು ಇ-ಸಂಜೀವನಿ ಸೇರಿ ಹಲವಾರು ತುರ್ತು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ.