ಬೆಂಗಳೂರು: ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವವಿದೆ. ನಾನು ಸಿಎಂ ಆಗದೇ ಇರಬಹುದು, ಆದರೆ ಆಡಳಿತ ವಿಚಾರದಲ್ಲಿ ಅವರಿಗಿಂತ ಅನುಭವ ಹೊಂದಿದ್ದೇನೆ. ಅವರಿಂದ ಕಲಿಯುವ ಅಗತ್ಯ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ನಾನು ಬಹಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಡಳಿತ ಹೇಗೆ ಮಾಡಬೇಕು, ಯಾರ ಜೊತೆ ಸಭೆ ಮಾಡಬೇಕು, ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ” ಎಂದು ತಿರುಗೇಟು ನೀಡಿದರು.
ಮುಂದೆ ಬಿಜೆಪಿ, ಜೆಡಿಎಸ್ ವಿಲೀನ ಸಾಧ್ಯತೆ..
“ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ 'ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ' ಎಂಬ ಗೊಂದಲ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. “ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸುತ್ತೇನೆ. ಗೋವಿಂದರಾಜು ಅವರು ಕುಟುಂಬ ಸ್ನೇಹಿತರು, ನನಗೆ ಮೊದಲಿನಿಂದಲೂ ಪರಿಚಯಸ್ಥರು. ಅವರು ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ” ಎಂದರು.