ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಿಎಂ ಡಿಕೆಶಿ​! CM DK Shivakumar  
ರಾಜ್ಯ

ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಿಎಂ ಡಿಕೆಶಿ​! CM DK Shivakumar

ಪ್ರಮುಖ ಮುಖ್ಯಾಂಶಗಳು

  • ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್​ಗೆ ಹೃದಯಾಘಾತ
  • ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಇಕ್ಬಾಲ್ ಹುಸೇನ್​
  • ಆಸ್ಪತ್ರೆಗೆ ಭೇಟಿ ನೀಡಿ ಇಕ್ಬಾಲ್​ ಹುಸೇನ್​ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ನಗರದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ( Iqbal Hussain ) ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ( CM DK Shivakumar  ) ಅವರು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಜತೆಗಿದ್ದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಶಾಸಕ ಇಕ್ಬಾಲ್​ ಹುಸೇನ್​ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತು. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಎಲ್ಲರ ಪರೀಕ್ಷೆಯನ್ನು ನಡೆಸಿದ್ದು, ಗಾಬರಿಯಾಗುವಂಥದ್ದು ಏನೂ ಇಲ್ಲ. ವೈದ್ಯರು ಇನ್ನೂ ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ಹೇಳಿದರು.
ಇದೇ ಸಮಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ದುರುಪಯೋಗವನ್ನು ತಡೆಯಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಇದು ತಲುಪುವಂತೆ ಮಾಡಲು 'ಐಡೆಂಟಿಫಿಕೇಷನ್ ಕಾರ್ಡ್' (ಗುರುತಿನ ಚೀಟಿ) ನೀಡುವುದು ಅಗತ್ಯವಾಗಿದೆ. ಕೆಲವರು ಗಡಿಬಿಡಿಯಲ್ಲಿ ತಪ್ಪು ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದು, ಇದರಿಂದಾಗಿ ಹಣ ಬೇರೆಯವರ ಖಾತೆಗೆ ಜಮೆಯಾಗುತ್ತಿದೆ. ಇಂತಹ ಲೋಪದೋಷಗಳನ್ನು ಸರಿಪಡಿಸಿ, ವ್ಯವಸ್ಥೆಯನ್ನು ಸುಗಮಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಿಡದಿಯಲ್ಲಿ ಕೈಗೊಳ್ಳಲಾಗಿರುವ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಈಗಿನ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯಲ್ಲ ಎಂದಿದ್ದಾರೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲೇ ಇದಕ್ಕೆ ನೋಟಿಫಿಕೇಷನ್ ಹೊರಡಿಸಲಾಗಿತ್ತು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲೂ ಭೂಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಪ್ರಸ್ತುತ ಈ ಯೋಜನೆಗೆ ರೈತರೆಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ವಿರೋಧ ಪಕ್ಷದವರು ಕೇವಲ ರಾಜಕಾರಣ ಮಾಡುವುದಕ್ಕೋಸ್ಕರ ಈಗ ಪಾದಯಾತ್ರೆ ಹಾಗೂ ಪ್ರತಿಭಟನೆಗಳ ಮೂಲಕ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಇಕ್ಬಾಲ್ ಹುಸೇನ್ ಆರೋಗ್ಯ ಸ್ಥಿರ

ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಭಾನುವಾರ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ವೈದ್ಯರ ತೀವ್ರ ನಿಗಾ ಘಟಕದಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕರಿಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ರಾಮನಗರ ಮತ್ತು ಬೆಂಗಳೂರಿನ ಅವರ ನೂರಾರು ಬೆಂಬಲಿಗರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದು, ಆಪ್ತ ವಲಯದಲ್ಲಿ ತೀವ್ರ ಆತಂಕ ಮನೆಮಾಡಿದೆ. ಇಕ್ಬಾಲ್ ಹುಸೇನ್ ಅವರ ಆರೋಗ್ಯದ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರ ಕುಟುಂಬಸ್ಥರು ಹಾಗೂ ಆಪ್ತರು ಬೆಂಬಲಿಗರಿಗೆ ತಿಳಿಸಿದ್ದಾರೆ. ಶಾಸಕರು ಶೀಘ್ರ ಗುಣಮುಖರಾಗಲಿ ಎಂದು ಕ್ಷೇತ್ರದಾದ್ಯಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.