ಕರ್ನಾಟಕ ಸಿಎಂ ಡಿಕೆ ಶಿವಕುಮಾರ್
- ಬಸವರಾಜ ಹೊರಟ್ಟಿ ಒಪ್ಪಿದಿ ಅವರೇ ಹಂಗಾಮಿ ಸಭಾಪತಿ
- ಖಾತೆ ಹಂಚಿಕೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದ ಸಿಎಂ
ಬೆಂಗಳೂರು: ಬಸವರಾಜ ಹೊರಟ್ಟಿ ಅವರು ಈಗಾಗಲೇ ರಾಜೀನಾಮೆ ಕೊಡುವುದಾಗಿ ದೇಶದ ಮುಂದೆ ನಿರ್ಧಾರ ಮಾಡಿದ್ದಾರೆ. ಅವರು ಒಪ್ಪಿದರೆ ಅವರನ್ನೇ ಹಂಗಾಮಿ ಸಭಾಪತಿಯನ್ನಾಗಿ ಮಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊರಟ್ಟಿಯವರು ರಾಜೀನಾಮೆ ಕೊಡುವುದಾಗಿ ದೇಶದ ಮುಂದೆಯೇ ಘೋಷಿಸಿದ್ದಾರೆ. ಅವರು ಒಪ್ಪಿಗೆ ನೀಡುವುದಾದರೆ, ಅವರನ್ನೇ ಹಂಗಾಮಿ ಸಭಾಪತಿ ಮಾಡುತ್ತೇವೆ. ಅವರಿಗೆ ಮತ್ತು ಅವರ ಸ್ಥಾನಕ್ಕೆ ನಾವು ಸಂಪೂರ್ಣ ಗೌರವವನ್ನು ಕೊಡುತ್ತೇವೆ. ಇಲ್ಲಿ ಅವಿಶ್ವಾಸ ನಿರ್ಣಯದ ಪ್ರಶ್ನೆಯೇ ಬರುವುದಿಲ್ಲ ಎಂದರು.
ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿರುವ ಶಾಸಕ ಕೃಷ್ಣಪ್ಪ ವಿಚಾರಕ್ಕೆ ಉತ್ತರಿಸಿದ ಸಿಎಂ, ಎಲ್ಲರೂ ಸಚಿವ ಸ್ಥಾನ ಕೇಳುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಯಾರಿಗೂ ಏನೂ ಬೇಸರವಿಲ್ಲ. ಪಕ್ಷದಲ್ಲಿ ಹಿರಿಯರಿದ್ದಾರೆ. ಏನಾದರೂ ಒಂದು ಜವಾಬ್ದಾರಿ ಕೊಡುವ ಅವಶ್ಯಕತೆಯಿದೆ. ಮಹಿಳಾ ಮಂತ್ರಿ ಆಯ್ಕೆ ವಿಚಾರವನ್ನು ನಿಮಗೆ ಹೇಳಿಯೇ ಮಾಡುತ್ತೇವೆ ಎಂದು ಹೇಳಿದರು.
ಹೊರಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸೂಚಿಸಿರುವುದಕ್ಕೆ ಬಿಜೆಪಿ ಹೊರಹಾಕಿರುವ ಅಸಮಾಧಾನಕ್ಕೆ ತಿರುಗೇಟು ನೀಡಿದ ಡಿಕೆಶಿ, ಯಡಿಯೂರಪ್ಪ ಎಷ್ಟು ದಿನ ಒಬ್ಬರೇ ಸಿಎಂ ಆಗಿದ್ದರು? ದೆಹಲಿಯಲ್ಲಿ ಎಷ್ಟು ದಿನ ಇರಲಿಲ್ಲ? ಬಿಜೆಪಿ ಅವರ ಪಟ್ಟಿಯನ್ನು ನಾನೂ ಹೇಳಲಾ? ಎಂದು ಸಿಡಿಮಿಡಿಯಲ್ಲೇ ಹೇಳಿದರು.
ಖಾತೆ ಹಂಚಿಕೆ ವಿಳಂಬ
ಖಾತೆ ಹಂಚಿಕೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು. ಸದನಕ್ಕೆ ಸಚಿವರ ತಯಾರಿಗೆ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 15ನೇ ತಾರೀಕಿನವರೆಗೂ ಸಮಯವಿದೆ. 13ರಂದು ಸಂತಾಪ ಇದೆ ಮತ್ತು 14ರಂದು ಎಲ್ಲರ ಪರಿಚಯ ಮಾಡುವ ಕಾರ್ಯಕ್ರಮ ಇರುತ್ತದೆ. ಸಚಿವ ಸಂಪುಟದಲ್ಲಿ ಸಣ್ಣ ಬದಲಾವಣೆಗಳು ಇರಲಿದೆ ಎಂದು ಹೇಳಿದರು.